ನವದೆಹಲಿ: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತ ಸರ್ಕಾರದ ಮಹತ್ತ್ವಪೂರ್ಣ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ನೀಡಿ ಗೌರವಿಸಿದರು.
ಅನಂತ್ ನಾಗ್ ಅವರು ಕನ್ನಡದಷ್ಟೇ ಅಲ್ಲದೆ ಹಿಂದಿ, ಮರಾಠಿ, ತಮಿಳು ಚಿತ್ರರಂಗಗಳಲ್ಲೂ ತಮ್ಮ ಅಭಿನಯದಿಂದ ಆಳವಾದ ಪ್ರಭಾವ ಬೀದಿದ್ದಾರೆ. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು, ರಂಗಭೂಮಿಯಲ್ಲೂ ಸಕ್ರಿಯರಾಗಿದ್ದವರು. ನಾಟಕರಂಗದಲ್ಲಿ ಅವರು ಸಲ್ಲಿಸಿರುವ ಸೇವೆ ಅಪಾರವಾಗಿದೆ.
ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಿಗಬೇಕು ಎಂಬುದು ಹಲವಾರು ವರ್ಷಗಳಿಂದ ಕನ್ನಡಿಗರ ಹಂಬಲವಾಗಿತ್ತು. ಈ ಬಾರಿ ಅವರ ಶ್ರಮ, ಸಾಧನೆಗೆ ನ್ಯಾಯ ದೊರಕಿದಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.