Thursday, April 3, 2025
Google search engine

Homeಸಿನಿಮಾಹಿರಿಯ ನಟ, ಹಾಸ್ಯ ಕಲಾವಿದ ಸರಿಗಮ ವಿಜಿ ಇನ್ನಿಲ್ಲ

ಹಿರಿಯ ನಟ, ಹಾಸ್ಯ ಕಲಾವಿದ ಸರಿಗಮ ವಿಜಿ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟ, ಹಾಸ್ಯ ಕಲಾವಿದ ಸರಿಗಮ ವಿಜಿ ವಿಧಿವಶರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಸರಿಗಮ ವಿಜಿ ಅವರು ಕಳೆದ ಕೆಲ ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಶ್ವಾಸಕೋಶದ ಸಮಸ್ಯೆ ಸರಿಗಮ ವಿಜಿ ಅವರನ್ನ ಕಾಡುತ್ತಿತ್ತು. ಚಿಕಿತ್ಸೆಗಾಗಿ ಸರಿಗಮ ವಿಜಿ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ನಾಳೆ (ಜನವರಿ 16) ಬೆಳಗ್ಗೆ 10 ರಿಂದ 12 ಗಂಟೆ ಹೊತ್ತಿಗೆ ಚಾಮರಾಜಪೇಟೆಯ ಟಿ.ಆರ್ ಮಿಲ್ ಬಳಿ ಬರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವಿಜಿ ಅವರದ್ದು ಬಲು ಸುದೀರ್ಘವಾದ ಸಿನಿಮಾ ಮತ್ತು ರಂಗಭೂಮಿ ಪಯಣ. ನಾಟಕಗಳಲ್ಲಿ ನಟಿಸುತ್ತಿದ್ದ ವಿಜಿ ಅವರ ‘ಸಂಸಾರದಲ್ಲಿ ಸರಿಗಮ’ ನಾಟಕ ಬಹಳ ಹೆಸರು ಕೊಟ್ಟಿತ್ತು. ಇದೇ ಕಾರಣಕ್ಕೆ ಅವರಿಗೆ ಸರಿಗಮ ವಿಜಿ ಹೆಸರು ಬಂದಿತ್ತು. ನಾಟಕಗಳ ನಿರ್ದೇಶನವನ್ನೂ ಮಾಡಿದ್ದಾರೆ. ನಾಟಕದಿಂದ ಸಿನಿಮಾಕ್ಕೆ ಪದಾರ್ಪಣೆ ಮಾಡಿದ ವಿಜಿ ಅವರು ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರ, ಹಾಸ್ಯ ಪಾತ್ರ ಕೆಲವೆಡೆ ವಿಲನ್ ಪಾತ್ರಗಳಲ್ಲಿಯೂ ನಟಿಸಿದ್ದಾರೆ.

ಸರಿಗಮ ವಿಜಿ ಅಭಿನಯಿಸಿದ ಚೊಚ್ಚಲ ಸಿನಿಮಾ ‘ಬೆಳುವಲದ ಮಡಿಲಲ್ಲಿ’. ‘ಕಪ್ಪು ಕೋಲ’, ‘ಪ್ರತಾಪ್’, ‘ಮನ ಮೆಚ್ಚಿದ ಸೊಸೆ’, ‘ಕೆಂಪಯ್ಯ ಐಪಿಎಸ್‌’, ‘ಜಗತ್ ಕಿಲಾಡಿ’, ‘ಯಮಲೋಕದಲ್ಲಿ ವೀರಪ್ಪನ್’, ‘ದುರ್ಗಿ’, ‘ಡಕೋಟ ಎಕ್ಸ್‌ಪ್ರೆಸ್’ ಸೇರಿದಂತೆ ಸುಮಾರು 269ಕ್ಕೂ ಅಧಿಕ ಚಿತ್ರಗಳಲ್ಲಿ ಸರಿಗಮ ವಿಜಿ ಮಿಂಚಿದ್ದಾರೆ. 80ಕ್ಕೂ ಅಧಿಕ ಚಿತ್ರಗಳಿಗೆ ಸರಿಗಮ ವಿಜಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಇನ್ನೂ ಕಿರುತೆರೆಯ ಧಾರಾವಾಹಿಗಳನ್ನೂ ಸರಿಗಮ ವಿಜಿ ನಿರ್ದೇಶನ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular