ರಾಮನಗರ: ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ನಟಿ ಬಿ. ಸರೋಜಾ ದೇವಿ ಅವರ ಅಂತ್ಯಸಂಸ್ಕಾರ ಇಂದು ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ನಡೆದಿದೆ.
ಒಕ್ಕಲಿಗ ಸಮುದಾಯದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿದೆ. ತಮ್ಮ ತೋಟದಲ್ಲಿ ತಾಯಿಯ ಸಮಾಧಿ ಪಕ್ಕವೇ ಸರೋಜಾ ದೇವಿ ಅವರನ್ನು ಕೂಡ ಮಣ್ಣು ಮಾಡಲಾಗಿದೆ.
ಬೆಂಗಳೂರಿನ ಮಲ್ಲೇಶ್ವರಂ ನಿವಾಸದ ಬಳಿ ಇಂದು ಬೆಳಗ್ಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಅಂಬುಲೆನ್ಸ್ ಮೂಲಕ ಅವರ ಪಾರ್ಥಿವ ಶರೀರವನ್ನುಚನ್ನಪಟ್ಟಣದತ್ತ ಸಾಗಿಸಲಾಯಿತು. ಈ ವೇಳೆ ದಾರಿಯುದ್ದಕ್ಕೂ ಅಭಿಮಾನಿಗಳು ಹಿರಿಯ ನಟಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ನಂತರ ಚನ್ನಪಟ್ಟಣದ ಗಾಂಧಿ ಭವನದ ಬಳಿ ಸಾರ್ವಜನಿಕ ದರ್ಶನ ಕ್ಕೆ ಅವಕಾಶ ಮಾಡಿಕೊಡಲಾಯಿತು. ಬಳಿಕ ಹುಟ್ಟೂರು ದಶವಾರ ಗ್ರಾಮಕ್ಕೆ ತರಲಾಯಿತು.
ಮೇರುನಟಿಯ ನಿಧನದಿಂದ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಅಂತ್ಯಸಂಸ್ಕಾರ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ಅಂತಿಮ ದರ್ಶನದಲ್ಲಿ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಸ್ಥಳೀಯ ರಾಜಕೀಯ ಪ್ರತಿನಿಧಿಗಳು, ಸಂಬಂಧಿಕರು ಹಾಗೂ ಗ್ರಾಮಸ್ಥರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು.
ಸರೋಜಾ ದೇವಿ ನಿಧನ: ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 87 ವರ್ಷದ ಸರೋಜಾ ದೇವಿಯವರು ನಿನ್ನೆ (ಜುಲೈ 14) ರಂದು ನಿಧನರಾದರು. ಎಂದಿನಿಂತೆ ನಿನ್ನೆ ಬೆಳಗ್ಗೆ ಎದ್ದು ತಿಂಡಿ ತಿಂದ ಬಳಿಕ ಸರೋಜಾ ದೇವಿಯವರು ಟಿವಿ ನೋಡುತ್ತಾ ಕುಳಿತಿದ್ದರು. ಈ ವೇಳೆ ತಲೆ ಸುತ್ತು ಬಂದಂತಾಗಿ ಏಕಾಏಕಿ ನೆಲಕ್ಕೆ ಬಿದ್ದಿದ್ದಾರೆ. ಇದರಿಂದ ಆತಂಕಗೊಂಡ ಮನೆಯವರು ಅವರನ್ನು ತಕ್ಷಣ ಹತ್ತಿರದ ಮಣಿಪಾಲ ಆಸ್ಪತ್ರೆಗೆಂದು ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗಮಧ್ಯೆಯೇ ನಟಿ ಕೊನೆಯುಸಿರೆಳೆದಿದ್ದಾರೆ.
ಬಳಿಕ ಅವರ ಪಾರ್ಥಿವ ಶರೀರವನ್ನು ಮಲ್ಲೇಶ್ವರಂನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಈ ಸ್ಯಾಂಡಲ್‌ವುಡ್ ನಟ- ನಟಿಯವರು ಸೇರಿದಂತೆ ಹಲವು ಗಣ್ಯರು ಸರೋಜಮ್ಮನ ಅಂತಿಮ ದರ್ಶನ ಪಡೆದುಕೊಂಡು ಕಣ್ಣೀರಾದರು.