Friday, April 11, 2025
Google search engine

Homeಸ್ಥಳೀಯಹಿರಿಯ ಪತ್ರಕರ್ತ ಈಚನೂರು ಕುಮಾರ್ ನಿಧನ

ಹಿರಿಯ ಪತ್ರಕರ್ತ ಈಚನೂರು ಕುಮಾರ್ ನಿಧನ

ಮೈಸೂರು: ಮೈಸೂರಿನ ಹಿರಿಯ ಪತ್ರಕರ್ತ ಈಚನೂರು ಕುಮಾರ್  ಅವರು ಇಂದು ಬೆಳಗ್ಗೆ ೧೧.೩೦ಕ್ಕೆ ನಿಧನರಾಗಿದ್ದಾರೆ.

ಅವರ ಇಬ್ಬರು ಮಕ್ಕಳು ಅಕ್ಷರಾ ಹಾಗೂ ಪತ್ರಕರ್ತ ಅಜಿತ್ ಅವರನ್ನು ಅಗಲಿದ್ದಾರೆ.

ಕೆಯುಡಬ್ಲ್ಯೂಜೆ ಸಂತಾಪ

ಹಿರಿಯ ಪತ್ರಕರ್ತರಾದ ಈಚನೂರು ಕುಮಾರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ ) ಸಂತಾಪ ವ್ಯಕ್ತಪಡಿಸಿದೆ.

ಕಲ್ಪತರು ಬೀಡು ತುಮಕೂರು ಜಿಲ್ಲೆ, ತಿಪಟೂರು ತಾಲ್ಲೂಕು, ಈಚನೂರುನಲ್ಲಿ ಶ್ರೀನಿವಾಸಾಚಾರ್ ಮತ್ತು ಸಾವಿತ್ರಮ್ಮನವರ ಪುತ್ರರಾಗಿ ೨೭-೧೦-೧೯೫೩ರಲ್ಲಿ ಈಚನೂರು ಕುಮಾರ್ ಜನಿಸಿದರು.

ತಿಪಟೂರಿನ ಪ್ರೌಢಶಾಲೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಅಭ್ಯಾಸ, ಕಲ್ಪತರು ಕಾಲೇಜಿನಲ್ಲೆ ಪದವಿ ಪಡೆದರು. ಪ್ರೌಡಶಾಲೆ, ಕಾಲೇಜಿನಲ್ಲಿಯೂ ಕನ್ನಡ ಐಚ್ಛಿಕ ವಿಷಯವಾಗಿತ್ತು.

೧೯೭೫ನೆ ಇಸವಿಯ ತುರ್ತು ಪರಿಸ್ಥಿತಿಯಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣರ ಸಂಪೂರ್ಣ ಕ್ರಾಂತಿಗಾಗಿ ನವನಿರ್ಮಾಣ ಸಮಿತಿ ಹಾಗೂ ಲೋಕ ಸಂಘರ್ಷ ಸಮಿತಿ ಕಾರ್ಯಕರ್ತನಾಗಿ ಸೇರಿಕೊಂಡರು.

ಈ ಕರಾಳ ದಿನಗಳಲ್ಲೆ ಸಂಕೋಲೆ- ಸಂಗ್ರಾಮ- ಸ್ವಾತಂತ್ರ್ಯ ಹೋರಾಟದಲ್ಲಿ ೨೦ ತಿಂಗಳು ಹಗಲು ರಾತ್ರಿ ಎನ್ನದೇ ಭಾಗಿಯಾಗಿದ್ದರು.

ಬೆಂಗಳೂರಿನ ಲೋಕವಾಣಿ ಪತ್ರಿಕೆಯಲ್ಲಿ ಈಚನೂರು ಕುಮಾರ್ ಅವರ ಲೇಖನಗಳು ಮೊದಲು ಪ್ರಕಟಗೊಂಡವು.

ಹೆಚ್ಚಿನ ಶಿಕ್ಷಣ ಪಡೆಯಲು ಮೈಸೂರಿಗೆ ಆಗಮಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ. ಕನ್ನಡ, ಪತ್ರಿಕೋದ್ಯಮ ಶಿಕ್ಷಣ ಗಳಿಸಿದರು.

ಮೈಸೂರಿನ ದಿನಪತ್ರಿಕೆಗಳಾದ ನವ ಧ್ವನಿ, ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರು, ಮೈಸೂರು ಮಾನಿಟರ್, ಕನ್ನಡ ಪ್ರಭ, ಆಂದೋಲನ, ಮಹಾನಂದಿ, ದಿ ಡೆಕ್ಕನ್ ನ್ಯೂಸ್, ವಿಜಯ ಕರ್ನಾಟಕ ಮತ್ತಿತರ ಪತ್ರಿಕೆಗಳಲ್ಲಿ ವರದಿಗಾರಿಕೆ, ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಜಾವಾಣಿ ಪತ್ರಿಕೆಯಲ್ಲಿ ವಾರಕ್ಕೆ ಎರಡು ದಿನ ಚರಿತ್ರ-ಚಂದ್ರಿಕೆ, ಕ್ಷಾತ್ರ ಮೈಸೂರು, ಆ ದಿನಗಳು ಅಂಕಣಗಳನ್ನು ಪ್ರಕಟಿಸಿದರು.

ಗೋಕಾಕ್ ಚಳವಳಿಯಲ್ಲಿ ಇವರು ಪಾಲ್ಗೊಂಡಿದ್ದರು.

ಪುಸ್ತಕಗಳು

ಅರಮನೆಯೆಂಬ ಜನಮನೆ

ಮೈಸೂರು ಪಾರಂಪರಿಕ ತಾಣಗಳು

ನಾಡಿಗಾಗಿ ದುಡಿದ ಮಹನೀಯರು

ಸಹಕಾರಿ ಧುರೀಣ ಕಂಠೀರವ ನರಸಿಂಹರಾಜ ಒಡೆಯರ್

ಅಭಿನವ ಕಂಠೀರವ ನರಸಿಂಹರಾಜ ಒಡೆಯರ್

ವಿಶ್ವದ ಮೊದಲ ಮಹಾಯುದ್ದಕ್ಕೆ ಮೈಸೂರಿನ ಸಹಾಯ

ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ

ರಾಜಮಹಾರಾಜರ ಮೈಸೂರು

ಗಣಿತ ಶಾಸ್ತ್ರದ ಚರಿತ್ರೆ

ಪತ್ರಕರ್ತನ ಟಿಪ್ಪಣಿ

ಪ್ರಶಸ್ತಿಗಳು:

 ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ-2005, ಜಗದ್ಗುರು ಶಿವರಾತ್ರೀಶ್ವರ ಜಿಲ್ಲಾ ಮಾಧ್ಯಮ ಪ್ರಶಸ್ತಿ-2011, ತಿರುಮಲೆ ತಾತಾಚಾರ್ಯ ಶರ್ಮ ಪ್ರಶಸ್ತಿ ವಿಶ್ವಸಂವಾದ ಕೇಂದ್ರದ ಪ್ರಶಸ್ತಿ ಲಭಿಸಿದೆ.

RELATED ARTICLES
- Advertisment -
Google search engine

Most Popular