ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಶರಣರನ್ನು ಖುಲಾಸೆಗೊಳಿಸಿದ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಸಂತ್ರಸ್ತೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ನವೆಂಬರ್ 26 ರಂದು ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಚನ್ನಬಸಪ್ಪ ಹಡಪದ್ ನೀಡಿದ ತೀರ್ಪಿನ ವಿರುದ್ಧ ಸಂತ್ರಸ್ತೆ ತನ್ನ ವಕೀಲ ಶ್ರೀನಿವಾಸ್ ಡಿಸಿ ಮೂಲಕ ಕ್ರಿಮಿನಲ್ ಮೇಲ್ಮನವಿ(CRL A 2498/2025) ಸಲ್ಲಿಸಿದ್ದಾರೆ.
2022 ಆಗಸ್ಟ್ 31 ರಂದು ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್, ಮೊದಲ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶರಣರು ಸೇರಿದಂತೆ ಪ್ರಕರಣದ ಎರಡನೇ ಆರೋಪಿ ರಶ್ಮಿ ಹಾಗೂ ನಾಲ್ಕನೇ ಆರೋಪಿ ಪರಮಶಿವಯ್ಯ ಅವರನ್ನು ಕೂಡ ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದ್ದು, ಈ ತೀರ್ಪು ಪ್ರಶ್ನಿಸಿ ಸಂತ್ರಸ್ತೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ವೈದ್ಯಕೀಯ ವರದಿಯಲ್ಲಿ ಲೈಂಗಿಕ ದೌರ್ಜನ್ಯದ ಯಾವುದೇ ಪುರಾವೆಗಳಿಲ್ಲ ಮತ್ತು ವೈದ್ಯರು ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತರು ನೀಡಿದ ಸಾಕ್ಷ್ಯಗಳು ವಿರೋಧಾತ್ಮಕವಾಗಿವೆ ಎಂದು ಕೆಳ ನ್ಯಾಯಾಲಯವು ತೀರ್ಪು ನೀಡಿತ್ತು. ಕಳೆದ 15 ವರ್ಷಗಳಿಂದ ಶರಣರು ಮತ್ತು ಬಸವರಾಜನ್ ನಡುವೆ ಆಸ್ತಿ ವಿವಾದವಿತ್ತು ಎಂದು ನ್ಯಾಯಾಲಯವು ಕಂಡುಕೊಂಡಿದ್ದು, ಇದು ಪ್ರಕರಣವನ್ನು ದುರ್ಬಲಗೊಳಿಸಿದೆ ಎಂದಿದ್ದಾರೆ.
ಅಲ್ಲದೇ ಶ್ರೀಗಳ ವಿರುದ್ಧ ದಾಖಲಾಗಿರುವ ಪ್ರಕರಣವು ಪಿತೂರಿ ಎಂದು ನ್ಯಾಯಾಲಯ ಹೇಳಿದ್ದು, ಸಂತ್ರಸ್ತರು ನೀಡಿದ ಹೇಳಿಕೆಗಳು ಒಂದಕ್ಕೊಂದು ಹೊಂದಿಕೆಯಾಗುತ್ತಿಲ್ಲ ಹಾಗೂ ಮಾಜಿ ಶಾಸಕ ಮತ್ತು ಮಠದ ವ್ಯವಸ್ಥಾಪಕ ಎಸ್.ಕೆ. ಬಸವರಾಜನ್ ಘಟನೆಗೆ ಸಂಬಂಧಿಸಿದಂತೆ ಎಸ್ ಪಿ ಗೆ ಸಾಕ್ಷ್ಯ ಮತ್ತು ಫೋಟೋಗಳನ್ನು ನೀಡಿರುವುದಾಗಿ ಹೇಳಿದ್ದರೂ, ವಿಚಾರಣೆಯ ಸಮಯದಲ್ಲಿ ಅದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.



