Friday, April 11, 2025
Google search engine

HomeUncategorizedರಾಷ್ಟ್ರೀಯ'ವಿಜಯ ದಿವಸ್': ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಯೋಧರಿಗೆ ಗೌರವ ನಮನ

‘ವಿಜಯ ದಿವಸ್’: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಯೋಧರಿಗೆ ಗೌರವ ನಮನ

ನವದೆಹಲಿ: 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೇನೆಯ ವಿಜಯದ ಸ್ಮರಣಾರ್ಥವಾಗಿ ಪ್ರತಿ ವರ್ಷ ಡಿಸೆಂಬರ್ 16 ರಂದು ‘ವಿಜಯ ದಿವಸ್’ ಅನ್ನು ಆಚರಿಸಲಾಗುತ್ತದೆ. ಇಂದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿ ಅನೇಕರು ಗೌರವ ನಮನ ಸಲ್ಲಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ‘1971ರಲ್ಲಿ ಭಾರತದ ಐತಿಹಾಸಿಕ ವಿಜಯಕ್ಕೆ ಕಾರಣರಾದ ವೀರ ಯೋಧರ ಧೈರ್ಯ ಮತ್ತು ತ್ಯಾಗವನ್ನು ನಾವು ಸದಾ ಸ್ಮರಿಸುತ್ತೇವೆ. ಯೋಧರ ನಿಸ್ವಾರ್ಥ ಸಮರ್ಪಣೆ ಮತ್ತು ಅಚಲವಾದ ಸಂಕಲ್ಪ ನಮ್ಮ ರಾಷ್ಟ್ರವನ್ನು ರಕ್ಷಿಸಿದೆ. ಯೋಧರ ತ್ಯಾಗ ಮತ್ತು ಬಲಿದಾನವು ಮುಂದಿನ ಪೀಳಿಗೆಗೆ ಸದಾ ಸ್ಫೂರ್ತಿದಾಯಕವಾಗಿರುತ್ತದೆ’ ಎಂದು ತಿಳಿಸಿದ್ದಾರೆ.

‘1971ರ ಯುದ್ಧದ ಸಮಯದಲ್ಲಿ ಅದಮ್ಯ ಧೈರ್ಯವನ್ನು ಪ್ರದರ್ಶಿಸಿ, ಭಾರತಕ್ಕೆ ವಿಜಯವನ್ನು ತಂದುಕೊಟ್ಟ ನಮ್ಮ ವೀರ ಯೋಧರ ಪರಕ್ರಮ ಮತ್ತು ತ್ಯಾಗವನ್ನು ನಾವು ಸದಾ ನೆನಪಿಸಿಕೊಳ್ಳುತ್ತೇವೆ. ಯೋಧರ ಸಾಹಸಮಯ ಕಥೆಗಳು ಪ್ರತಿಯೊಬ್ಬ ಭಾರತೀಯನಿಗೆ ಸ್ಫೂರ್ತಿದಾಯಕವಾಗಿದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

‘ವಿಜಯ್ ದಿವಸ್‌ನ ಸಂದರ್ಭದಲ್ಲಿ ನಮ್ಮ ಸಶಸ್ತ್ರ ಪಡೆಗಳ ಶೌರ್ಯ, ಸಮರ್ಪಣೆ ಮತ್ತು ಸಂಕಲ್ಪಕ್ಕೆ ನಾನು ವಂದಿಸುವೆ. ಭಾರತದ ಸಾರ್ವಭೌಮತ್ವವನ್ನು ರಕ್ಷಿಸುತ್ತಾ ಬಾಂಗ್ಲಾದೇಶವನ್ನು ಅನ್ಯಾಯದಿಂದ ಮುಕ್ತಗೊಳಿಸಿದ 1971ರ ಯುದ್ಧದ ಎಲ್ಲಾ ವೀರರ ಅದಮ್ಯ ಧೈರ್ಯ ಮತ್ತು ತ್ಯಾಗವನ್ನು ಸದಾ ಸ್ಮರಿಸುತ್ತೇವೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ‘ಎಕ್ಸ್‌’ ಪೋಸ್ಟ್‌ನಲ್ಲಿ ಹೇಳಿದ್ದಾರೆ.

‘1971ರಲ್ಲಿ ಭಾರತೀಯ ಸೇನಾ ಪಡೆಯು ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಿದ ಈ ದಿನದಂದು ಪ್ರಪಂಚದ ಭೌಗೋಳಿಕತೆಯೂ ಬದಲಾಯಿತು. ಇಂದಿರಾ ಗಾಂಧಿ ಅವರ ಸಮರ್ಥ, ದೂರದೃಷ್ಟಿಯ ಮತ್ತು ನಿರ್ಣಾಯಕ ನಾಯಕತ್ವದಲ್ಲಿ ವಿಜಯ ಸಾಧಿಸಲಾಯಿತು. ಭಾರತಮಾತೆಯ ವೀರ ಪುತ್ರರ ತ್ಯಾಗ ಮತ್ತು ಸಮರ್ಪಣೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

‘ನಮ್ಮ ರಾಷ್ಟ್ರದ ಸಾರ್ವಭೌಮತ್ವವನ್ನು ರಕ್ಷಿಸುವ ವೀರ ಸೈನಿಕರ ಅಚಲ ಧೈರ್ಯ, ತ್ಯಾಗ ಮತ್ತು ಸಮರ್ಪಣೆಯನ್ನು ನಾವು ಗೌರವಿಸುತ್ತೇವೆ. ಯೋಧರ ನಿಸ್ವಾರ್ಥ ಸೇವೆಯು ಬಲಿಷ್ಠ, ಅಖಂಡ ಭಾರತಕ್ಕಾಗಿ ಕೆಲಸ ಮಾಡಲು ನಮಗೆ ಸದಾ ಸ್ಫೂರ್ತಿ ನೀಡುತ್ತದೆ. ಅವರ ತ್ಯಾಗವನ್ನು ಸ್ಮರಿಸೋಣ’ ಎಂದು ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular