ಮೈಸೂರು : ಕ್ರೀಡಾ ಇಲಾಖೆಗೆ ಹಸ್ತಾಂತರವಾಗಿದ್ದ KSIC ಭೂಮಿಯನ್ನು ಈಗ ಅಧಿಕೃತವಾಗಿ ಮರಳಿ ಪಡೆಯಲಾಗಿದ್ದು, ಈ ಮೂಲಕ ಮೈಸೂರು ಸಿಲ್ಕ್‌ನ ಅಸ್ಮಿತೆ ಮತ್ತು ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸಿದಂತಾಗಿದೆ. ಇದು ಕರ್ನಾಟಕದ ಜನತೆಯ ಹಾಗೂ ಮೈಸೂರು ರೇಷ್ಮೆ ಪರಂಪರೆಯನ್ನು ನಂಬಿರುವ ಸಾವಿರಾರು ಕಾರ್ಮಿಕರ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದ್ದಾರೆ.
ಇನ್ನು ಮೈಸೂರಿನ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (KSIC) ಐದು ಎಕರೆ ಭೂಮಿಯನ್ನು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಉಚಿತವಾಗಿ ಸರ್ಕಾರ ಹಸ್ತಾಂತರಿಸಿ ಆದೇಶಿಸಿತ್ತು. ಇದಕ್ಕೆ ಹೋರಾಟ, ಆಕ್ಷೇಪ ವ್ಯಕ್ತವಾಗಿತ್ತು. ಕೊನೆಗೂ ಸರ್ಕಾರ ಪ್ರತಿಭಟನೆಗೆ ಮಣಿದಿದ್ದು, ಈ ವಿಚಾರ ಸಂಬಂಧ ಎಕ್ಸ್ ಮಾಡಿರುವ ಆರ್.ಅಶೋಕ್ ಅವರು, ಸರ್ಕಾರ ಕನ್ನಡಿಗರ ಹೋರಾಟಕ್ಕೆ ಮಣಿದಿದೆ.
ಕಳೆದ ಮಾ.9ರಂದು ವಿಧಾನಸಭೆಯಲ್ಲಿ ಸ್ವತಃ ರೇಷ್ಮೆ ಸಚಿವರೇ ಭೂಮಿ ಹಸ್ತಾಂತರ, ನಿರ್ಧಾರ ಕೈ ಬಿಡುವ ಈ ಬಗ್ಗೆ ಘೋಷಣೆ ಮಾಡಿದ್ದರೂ. ಅದು ಕೇವಲ ಕಾಗದದ ಮೇಲೆ ಉಳಿಯುವ ಭೀತಿ ಇತ್ತು. ಆದರೆ, ನಮ್ಮ ನಿರಂತರ ಒತ್ತಡ, ಸದನದ ಒಳಗೆ ಮತ್ತು ಹೊರಗೆ ನಡೆಸಿದ ತೀವ್ರ ಹೋರಾಟ ಹಾಗೂ ಸಾರ್ವಜನಿಕರ ಬೆಂಬಲದಿಂದಾಗಿ ಇಂದು ಸರ್ಕಾರ ತನ್ನ ನಿರ್ಧಾರವನ್ನು ಕೈಬಿಟ್ಟು, ಉಚಿತ ಭೂಮಿ ಹಸ್ತಾಂತರ ಆದೇಶ ಹಿಂಪಡೆದಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಧ್ವನಿ ಎತ್ತುವ ಮೂಲಕ ಹಾಗೂ ಕೆ.ಎಸ್.ಐ.ಸಿ ಕಾರ್ಮಿಕರು, ಪರಿಸರವಾದಿಗಳು ಮತ್ತು ಕನ್ನಡಪರ ಸಂಘಟನೆಗಳನ್ನು ಒಗ್ಗೂಡಿಸಿ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದೆವು. ಈ ಸಂಘಟಿತ ಧ್ವನಿಗೆ ಇಂದು ಪ್ರತಿಫಲ ಸಿಕ್ಕಿದೆ.
ಸರ್ಕಾರದ ಈ ನಿರ್ಧಾರ ಕೇವಲ ಒಂದು ಆಡಳಿತಾತ್ಮಕ ಬದಲಾವಣೆಯಲ್ಲ, ಬದಲಾಗಿ ಜನರ ಇಚ್ಛಾಶಕ್ತಿಯ ಜಯ. ಮೈಸೂರು ಸಿಲ್ಕ್ ಎಂಬುದು ಕೇವಲ ಒಂದು ಬ್ರಾಂಡ್ ಅಲ್ಲ ಅದು ಕನ್ನಡಿಗರ ಹೆಮ್ಮೆ, ಪರಂಪರೆ ಮತ್ತು ನಮ್ಮ ಅಸ್ಮಿತೆ. ಈ ಪರಂಪರೆಗೆ ಚ್ಯುತಿ ತರುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ ಎಂಬ ಸಂದೇಶವನ್ನು ಈ ಹೋರಾಟ ರವಾನಿಸಿದೆ.
ಈ ಐತಿಹಾಸಿಕ ಗೆಲುವು ಭದ್ರವಾಗಿ ನಿಂತ ಪ್ರತಿ ಕಾರ್ಮಿಕನಿಗೆ, ಧ್ವನಿ ಎತ್ತಿದ ಪ್ರತಿ ಕನ್ನಡಿಗನಿಗೆ ಮತ್ತು ನಾಡಿನ ಪರಂಪರೆಯನ್ನು ಪ್ರೀತಿಸುವ ಪ್ರತಿ ನಾಗರಿಕನಿಗೆ ಸಲ್ಲುತ್ತದೆ. ಜನರ ಹಿತಾಸಕ್ತಿಯನ್ನು ಮರೆತು ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಕನ್ನಡಿಗರ ಪ್ರಬಲ ಪ್ರತಿರೋಧ ಇದ್ದೇ ಇರುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. KSIC ಅಂತಹ ಸಂಸ್ಥೆಗಳನ್ನು ರಕ್ಷಿಸಲು, ಬಲಪಡಿಸಲು ಮತ್ತು ಅದರ ಗೌರವವನ್ನು ಎತ್ತಿ ಹಿಡಿಯಲು ನಾವು ಸದಾ ಸನ್ನದ್ಧರಾಗಿರುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಇನ್ನೂ ಈ ಪ್ರಕರಣದ ಹಿನ್ನೆಲೆ ಏನು ಎಂಬುದನ್ನು ನೋಡುವುದಾದರೇ?
ಮೈಸೂರಿನಲ್ಲಿ ರೇಷ್ಮೆ ಇಲಾಖೆ ಹಾಗೂ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (KSIC)ಯ ಅಧೀನದಲ್ಲಿದ್ದ ಟಿ.ನರಸೀಪುರ ತಾಲ್ಲೂಕು ಬೈರಾಪುರ ಗ್ರಾಮದ (ಸರ್ವೆ ನಂಬರು 22/1ಎ, 22/2, 23/1ಡಿ, 23/2) ಜಮೀನಿನ ಪೈಕಿ ಒಟ್ಟು 05 ಎಕರೆ ಜಮೀನನ್ನು ಹಸ್ತಾಂತರಿಸಿ ಸರ್ಕಾರ ಆದೇಶಿಸಿತ್ತು.
ತಾಲ್ಲಕು ಮಟ್ಟದ ಕ್ರೀಡಾಂಗಣವನ್ನು ನಿರ್ಮಿಸಲು ಸರ್ಕಾರ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಉಚಿತವಾಗಿ ನೀಡಿ ಆದೇಶ ಹೊರಡಿಸಿತ್ತು. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ವ್ಯವಸ್ಥಾಪಕರು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.
ರೇಷ್ಮೆ ನೂಲು ತೆಗೆಯುವ ಟಿ.ನರಸೀಪುರ ಘಟಕದಿಂದ ಕಚ್ಚಾ ರೇಷ್ಮೆ ದಾರವನ್ನು ನಿಗಮದ ಎಲ್ಲಾ ಉತ್ಪಾದನಾ ಘಟಕಗಳಿಗೆ ಒದಗಿಸಲಾಗುತ್ತಿದೆ. ನಿಗಮದ ಎಲ್ಲಾ ಉತ್ಪಾದನಾ ಘಟಕಗಳಿಗೆ ಸದರಿ ಘಟಕವು ಆಧಾರ ಸ್ತಂಭವಾಗಿದೆ. ಇದರ ಅಗತ್ಯತೆ, ಬಾಯ್ಲರ್ ಘಟಕ ನಿರ್ಮಾಣ ಸೇರಿ ಒಂದಷ್ಟು ಮಾಹಿತಿ ನೀಡಿದ್ದರು. ಈ ಭೂಮಿ ಘಟಕಕ್ಕೆ ಅಗತ್ಯವಾಗಿದೆ.
ಈ ಸಂಬಂಧ ಇಲ್ಲಿ ಕ್ರೀಡಾಂಗಣ ನಿರ್ಮಿಸುವ ನಿರ್ಧಾರ ಹಿಂಪಡೆಯುವಂತೆ ಕೋರಿದ್ದರು. ಪರಂಪರಾಗತ ರೇಷ್ಮೆ ಘಟಕದ ಭೂಮಿ ಹಸ್ತಾಂತರವನ್ನು ಕನ್ನಡಿಗರು ವಿರೋಧಿಸಿ ಪ್ರತಿಭಟಿಸಿದ್ದರು. ಅವರ ಹೋರಾಟಕ್ಕೆ ಮಣಿದು ಸರ್ಕಾರ ನಿರ್ಧಾರದಿಂದ ಹಿಂದೆ ಸರಿದಿದೆ.



