Tuesday, April 15, 2025
Google search engine

Homeರಾಜ್ಯಸುದ್ದಿಜಾಲವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರ ಪಾರ್ಲಿಮೆಂಟ್ ಪ್ರದಕ್ಷಿಣೆ ಪುಸ್ತಕ ಬಿಡುಗಡೆಯ ಬೀಳ್ಕೊಡುಗೆ ಸಮಾರಂಭ

ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರ ಪಾರ್ಲಿಮೆಂಟ್ ಪ್ರದಕ್ಷಿಣೆ ಪುಸ್ತಕ ಬಿಡುಗಡೆಯ ಬೀಳ್ಕೊಡುಗೆ ಸಮಾರಂಭ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.‌ನಗರ : ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ರಾಜಕಾರಣದ ಜತೆಗೆ ಸಾಹಿತ್ಯ ಕೃಷಿ ಹಾಗೂ ಬರವಣಿಗೆಯನ್ನು ಮೈಗೂಡಿಸಿಕೊಂಡಿದ್ದು ಇದು ದೇಶದ ಇತರ ರಾಜಕಾರಣಿಗಳಿಗೆ ಮಾದರಿ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ಮುಜಾಫರ್ ಅಸ್ಸಾದಿ ಹೇಳಿದರು.

ಪಾರ್ಲಿಮೆಂಟ್ ಪ್ರದಕ್ಷಿಣೆಗಳು ಪುಸ್ತಕ ಬಿಡುಗಡೆಗಾಗಿ ಲಂಡನ್ ನಗರಕ್ಕೆ ತೆರಳುತ್ತಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ಪಟ್ಟಣದ ಕೃಷ್ಣ ಮಂದಿರದಲ್ಲಿ ಅಭಿಮಾನಿಗಳು ಮತ್ತು ಸ್ನೇಹಿತರು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ರಾಜಕಾರಣಿಗಳು ತಮ್ಮ ಬದುಕು ಮತ್ತು ಸೇವೆಯ ಜತೆಗೆ ಸಾಧನೆಯನ್ನು ಪುಸ್ತಕ ರೂಪದಲ್ಲಿ ದಾಖಲಿಸಿದರೆ ಅದು ಭವಿಷ್ಯದಲ್ಲಿ ಇತರರಿಗೆ ಮಾರ್ಗದರ್ಶನದ ದಾರಿ ದೀಪವಾಗಲಿದ್ದು ಈ ಕೆಲಸವನ್ನು ಯುವ ರಾಜಕಾರಣಿಗಳು ಚಾಚು ತಪ್ಪದೆ ಮಾಡಬೇಕೆಂದರು.

ದೇಶದ ಸ್ವರೂಪ ಬದಲಿಸಿದ ಹಳೆಯ ಪಾರ್ಲಿಮೆಂಟ್ ಭಾರತದ ಜನರಿಗೆ ದೇವಾಲಯದಂತೆ ಇದ್ದು ಅದರ ಮೇಲೆ ನಮಗೆ ಸದಾ ಗೌರವ ಮತ್ತು ಭಕ್ತಿ ಇರಬೇಕೆಂದ ಅವರು ನಮಗೆ ಬದುಕು ಕಲ್ಪಿಸಿ ಕಟ್ಟಿಕೊಟ್ಟ ಆಸ್ಮಿತೆಯ ಸಂಕೇತವಾಗಿರುವ ಅದು ನಿತ್ಯ ನಿರಂತರವಾಗಿರಲಿ ಎಂದ ಆಶಿಸಿದರು.

ಪಾಶ್ಚಾತ್ಯ ದೇಶಗಳ ಸಂಸತ್ತುಗಳಲ್ಲಿ ಸಂಸದರು ಗಂಬೀರವಾಗಿ ಚರ್ಚಿಸಿ ಸರಳ ಜೀವನ ನಡೆಸಿ ಉತ್ತಮ ಕೆಲಸ ಮಾಡಿ ಸಂಸತ್ತಿನ ಗೌರವ ಹೆಚ್ಚಿಸುತ್ತಾರೆ ಆದರೆ ನಮ್ಮಲ್ಲಿ ಸಂಸತ್ತಿನ ಘನತೆ ಅದೋಗತಿಗಿಳಿದಿರುವುದು ವಿಷಾದನೀಯ ಎಂದು ನುಡಿದರು.

ಹತ್ತಾರು ದೇಶಗಳ ಸಂಸತ್ತಿನ ರೀತಿ, ರಿವಾಜು ಮತ್ತು ಆಡಳಿತ ವೈಖರಿಯ ಬಗ್ಗೆ ಅಧ್ಯಯನ ಮಾಡಿ ಅದನ್ನು ಪುಸ್ತಕದಲ್ಲಿ ದಾಖಲಿಸಿರುವ ಹೆಚ್.ವಿಶ್ವನಾಥ್ ನಮ್ಮ ನಡುವೆ ಬಿನ್ನವಾಗಿ ನಿಲ್ಲುವ ವ್ಯಕ್ತಿತ್ವದ ಬಿನ್ನ ರಾಜಕೀಯ ನಾಯಕ ಎಂದು ಬಣ್ಣಿಸಿದರು.

ಲೇಖಕಿ ಮತ್ತು ಸಂಸ್ಕೃತಿ ಚಿಂತಕಿ ಶುಭದ ಪ್ರಸಾದ್ ಹೆಚ್.ವಿಶ್ವನಾಥ್ ಅವರ ಸಾಹಿತ್ಯ ಜೀವನ ಮತ್ತು ರಾಜಕೀಯ ಸಾಧನೆಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಕಾಶಕ ಸೃಷ್ಟಿ ನಾಗೇಶ್ ಅವರನ್ನು ಸನ್ಮಾನಿಸಲಾಯಿತು.

ಜಿ.ಪಂ.ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಮಾಜಿ ಸದಸ್ಯರಾದ ಎಂ.ಟಿ.ಕುಮಾರ್, ಅಮಿತ್ ವಿ.ದೇವರಹಟ್ಟಿ, ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ.ಅಣ್ಣೇಗೌಡ, ಖ್ಯಾತ ಮೂಳೆ ತಜ್ಞ ಡಾ.ಮೆಹಬೂಬ್ ಖಾನ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಜಿ.ಸುಬ್ರಹ್ಮಣ್ಯ, ಸದಸ್ಯ ಕೆ.ಪಿ.ಪ್ರಭುಶಂಕರ್, ಮಾಜಿ ಸದಸ್ಯರಾದ ಕೆ.ಎಸ್.ಉಮಾಶಂಕರ್, ಪೆರಿಸ್ವಾಮಿ, ರಾಜ್ಯ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಹೆಚ್.ಡಿ.ಪ್ರಭಾಕರಜೈನ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅದ್ಯಕ್ಷ ವೈ.ಎಸ್.ಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್, ಹಿಂದೂ ಸೇನಾ ಸಮಿತಿ ಅಧ್ಯಕ್ಷ ಯು.ಕೃಷ್ಣಭಟ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಎಸ್.ಸಂದೇಶ್, ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಬೆಣಗನಹಳ್ಳಿಪ್ರಸನ್ನ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಸಾಹಿತಿಗಳಾದ ಹೆಗ್ಗಂದೂರು ಪ್ರಭಾಕರ್, ತಿಪ್ಪೂರುಕೃಷ್ಣ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅರ್ಜುನಹಳ್ಳಿಗಣೇಶ್, ಸುಕೃತಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವೈ.ಆರ್.ಶಿವಕುಮಾರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ನಿರ್ದೇಶಕ ಕೆ.ಎಚ್. ಬುಡೀಗೌಡ ಜಿಲ್ಲಾ ನಿರ್ದೇಶಕ ದಿಡ್ಡಹಳ್ಳಿಬಸವರಾಜು, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ, ದಲಿತ ಮುಖಂಡ ಹನಸೋಗೆನಾಗರಾಜು, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಪಿ.ಆನಂದ್, ಕ್ರೈಸ್ತ ಮುಖಂಡ ರವೀಶ್ ಮತ್ತಿತರರು ಇದ್ದರು.

ಕೆ.ಆರ್.‌ನಗರ: ಅನುಭವ ಮಂಟಪದ ಮೂಲಕ ಜಗತ್ತಿನ ಮೊದಲ ಸಂಸತ್ ಆರಂಭಿಸಿ ಸಮಾನತೆಯ ಸಮಾಜಕ್ಕೆ ನಾಂದಿ ಹಾಡಿದ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಇರುವ ಲಂಡನ್ ನಗರದ ಥೇಮ್ಸ್ ನದಿಯ ದಂಡೆಯಲ್ಲಿ ಪಾರ್ಲಿಮೆಂಟಿನ ಪ್ರದಕ್ಷಿಣೆಗಳು ಪುಸ್ತಕ ಬಿಡುಗಡೆಯಾಗುತ್ತಿರುವುದು ನನ್ನ ಜೀವನದ ಸಾರ್ಥಕ ಕ್ಷಣ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.

ಜುಲೈ, 20 ರಂದು ಶನಿವಾರ ಬಿಡುಗಡೆಯಾಗಲಿರುವ ಪಾರ್ಲಿಮೆಂಟ್ ಪ್ರದಕ್ಷಿಣೆಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಲಂಡನ್ ನಗರಕ್ಕೆ ತೆರಳುತ್ತಿರುವ ತಮಗೆ ಪಟ್ಟಣದ ಕೃಷ್ಣ ಮಂದಿರದಲ್ಲಿ ಅಭಿಮಾನಿಗಳು ಮತ್ತು ಸ್ನೇಹಿತರು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ನನ್ನ ಜೀವನದ ಕೊನೆಯ ಉಸಿರು ಇರುವ ತನಕ ರಾಜಕಾರಣ ಮತ್ತು ಸಮಾಜದ ಆಗೂ ಹೋಗುಗಳ ಬಗ್ಗೆ ನಿರಂತರವಾಗಿ ಬರೆಯುತ್ತೇನೆ ಎಂದರು.

ಕೆ.ಆರ್.ನಗರದ ಕೃಷ್ಣ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಂಡನ್ ನಗರಕ್ಕೆ ಪಾರ್ಲಿಮೆಂಟ್ ಪ್ರದಕ್ಷಿಣೆ ಪುಸ್ತಕ ಬಿಡುಗಡೆಗೆ ತೆರಳುತ್ತಿರುವ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮತ್ತು ಶಾಂತಮ್ಮವಿಶ್ವನಾಥ್ ದಂಪತಿಗಳನ್ನು ಅಭಿಮಾನಿಗಳು ಮತ್ತು ಹಿತೈಷಿಗಳು ಸನ್ಮಾನಿಸಿ ಬೀಳ್ಕೊಟ್ಟರು.

ಓದುವ ಸಂಸ್ಕೃತಿ ಮತ್ತು ಜನರ ಪರವಾಗಿ ಮಾತನಾಡುವ ಚಾತಿ ಇದ್ದರೆ ರಾಜಕಾರಣಿ ಅಭಿವೃದ್ಧಿ ಕೆಲಸ ಮಾಡಿ ಜನರ ನಾಡಿ ಮಿಡಿತವನ್ನು ಅರಿಯಬಹುದಾಗಿದ್ದು ಇಂದಿನ ಬಹುತೇಕ ರಾಜಕೀಯ ನಾಯಕರು ಓದುವ ಹವ್ಯಾಸ ಬೆಳೆಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೆ. ಆರ್. ನಗರ ತಾಲೂಕಿನ ಅಡಗೂರು ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ನನ್ನನ್ನು ಗುರುತಿಸಿದ ಹಿಂದುಳಿದ ವರ್ಗದ ನೇತಾರ ಡಿ. ದೇವರಾಜ ಅರಸರು ಶಾಸನ ಸಭೆಗೆ ಪ್ರವೇಶ ಪಡೆಯುವ ಅವಕಾಶ ನೀಡಿದರು ಇದರ ಜೊತೆಗೆ ಕ್ಷೇತ್ರದ ಮತದಾರರು ನಿರಂತರವಾಗಿ ನನ್ನನ್ನು ಆಶೀರ್ವಾದ ಮಾಡುತ್ತಿದ್ದಾರೆ ಎಂದು ಭಾವುಕರಾಗಿ ನುಡಿದರು.

ದೇಶಕ್ಕೆ ಸಾರ್ವಕಾಲಿಕ ಸಂವಿಧಾನವನ್ನು ರಚಿಸಿ ಕೊಟ್ಟ ಅಂಬೇಡ್ಕರ್ ನಮಗೆ ದೇವರಾಗಿದ್ದು ಸಂಸತ್ತು ದೇವಸ್ಥಾನವಾಗಿದೆ ಹಾಗಾಗಿ ನಾವು ಇದನ್ನು ಅರಿತು ಗೌರವದಿಂದ ನಡೆದುಕೊಳ್ಳಬೇಕು ಎಂದರಲ್ಲದೆ ನನ್ನ ರಾಜಕೀಯ ಏಳಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಪಾತ್ರವು ಮಹತ್ವದ್ದಾಗಿದೆ ಎಂದು ತಿಳಿಸಿದರು.

ನಮ್ಮ ಸಂಸತ್ತು ಹಳೆಯ ಕಟ್ಟಡದಲ್ಲಿ ಇದ್ದರೆ ತುಂಬಾ ಚೆನ್ನಾಗಿತ್ತು ಎಂದು ತಮ್ಮ ಅಭಿಪ್ರಾಯ ತಿಳಿಸಿದ ವಿಧಾನ ಪರಿಷತ್ ಸದಸ್ಯರು ಪಾರ್ಲಿಮೆಂಟ್ ಪ್ರದರ್ಶನಗಳು ನನ್ನ ಒಂಬತ್ತನೆಯ ಪುಸ್ತಕವಾಗಿದ್ದು ಇದು ಮನಸ್ಸಿಗೆ ಅಪಾರ ಖುಷಿ ನೀಡಿದ ಪುಸ್ತಕ ಎಂದು ಸಂತಸ ಹಂಚಿಕೊಂಡರು.

ಸಮಾರಂಭದಲ್ಲಿ ಭಾಗವಹಿಸಿದ್ದ ನೂರಾರು ಮಂದಿ ಅಭಿಮಾನಿಗಳು ಮತ್ತು ಹಿತೈಷಿಗಳು ಪಾರ್ಲಿಮೆಂಟ್ ಪ್ರದರ್ಶನಗಳು ಪುಸ್ತಕ ಬಿಡುಗಡೆಗೆ ಲಂಡನ್ ನಗರಕ್ಕೆ ತೆರಳುತ್ತಿರುವ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮತ್ತು ಶಾಂತಮ್ಮ ವಿಶ್ವನಾಥ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೊಟ್ಟರು.

ಕೆ..ಆರ್.ನಗರ- ಸಂಸತ್ತು ಮತ್ತು ಶಾಸನ ಸಭೆಗಳು ಕುಟುಂಬ ರಾಜಕಾರಣ ಮತ್ತು ರಿಯಲ್ ಎಸ್ಟೇಟ್ ಕುಳಗಳ ಅಡ್ಡೆಗಳಾಗಿದ್ದು ಪ್ರಜಾಪ್ರಭುತ್ವ ತನ್ನ ಪಾವಿತ್ರ್ಯ ಕಳೆದುಕೊಳ್ಳುತ್ತಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಸ್ಥಾನಿಕ ಸಂಪಾದಕ ಕೆ.ಶಿವಕುಮಾರ್ ಹೇಳಿದರು.

ಚುನಾಯಿತರಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವವರು ಪರಸ್ಪರ ದ್ವೇಷ ರಾಜಕಾರಣ ಮಾಡುತ್ತಿದ್ದು ಇದರಿಂದ ಸಂವಿದಾನಕ್ಕೆ ಅಪಚಾರವಾಗುತ್ತಿದ್ದು ಜನರು ಎಚ್ಚೆತ್ತುಕೊಳ್ಳದಿದ್ದರೆ ದೇಶ ವಿನಾಶದ ಅಂಚಿಗೆ ತಲುಪಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿರೋದ ಪಕ್ಷಗಳು ಜನರ ಮತ್ತು ದೇಶದ ಹಿತ ಕಡೆಗಾಣಿಸಿ ಬ್ಲಾಕ್ ಮೇಲ್ ಸಂಸ್ಕೃತಿ ಮೈಗೂಡಿಸಿಕೊಂಡಿದ್ದು ಇಂತಹ ವರ್ತನೆ ಮತ್ತು ರಾಜಕೀಯ ನಡೆಗಳು ನಮ್ಮನ್ನು ಪ್ರಪಾತಕ್ಕೆ ತಳ್ಳುತ್ತಿದ್ದು ಇದರಿಂದ ಭವಿಷ್ಯದ ದಿನಗಳು ತುಂಬಾ ಕರಾಳವಾಗಿರಲಿವೆಯೆಂದು ಎಚ್ಚರಿಸಿದರು.

ಅಧಿಕಾರ ಹಣವಂತರು ಮತ್ತು ಜಾತಿಗಳ ಪ್ರಭಾವಳಿಯೊಳಗೆ ಸಿಲುಕಿ ನಲುಗುತ್ತಿದ್ದು ಮುಂದೆ ಜನ ಸಾಮಾನ್ಯರು ಇದರ ವಿರುದ್ದ ಸೆಟೆದು ನಿಲ್ಲದಿದ್ದರೆ ಸಣ್ಣ, ಮಧ್ಯಮ ವರ್ಗದವರು ಹಾಗೂ ಬಡವರು ಬದುಕಲು ಸಾಧ್ಯವಿಲ್ಲ ಎಂದು ತಿಳಿಸಿದರು.

ವರ್ಷಗಟ್ಟಲೆ ರೈತರನ್ನು ರಸ್ತೆಯಲ್ಲಿ ನಿಲ್ಲಿಸಿದವರು ವಿಶ್ವ ನಾಯಕರಾಗಿ ಕಾಣುತ್ತಾರೆ ಇಂತಹ ವಿಚಾರಗಳನ್ನು ಹೆಚ್.ವಿಶ್ವನಾಥ್ ಅವರು ಪುಸ್ತಕದಲ್ಲಿ ದಾಖಲಿಸಿಲ್ಲಾ ಹಾಗಾಗಿ ಮುಂದಿನ ದಿನಗಳಲ್ಲಿ ಅವರು ಬರೆಯುವಾಗ ಇಂತಹ ಸಂಗತಿಗಳನ್ನು ಗಂಬೀರವಾಗಿ ಗಮನಿಸಬೇಕೆಂದು ಸಲಹೆ ನೀಡಿದರು.

RELATED ARTICLES
- Advertisment -
Google search engine

Most Popular