Tuesday, January 27, 2026
Google search engine

Homeರಾಜ್ಯVijayapura Robbery Case : ಹಾಡಹಗಲೇ ಪಿಸ್ತೂಲ್ ತೋರಿಸಿ 205 ಗ್ರಾಂ ಚಿನ್ನಾಭರಣ ಕಳವು

Vijayapura Robbery Case : ಹಾಡಹಗಲೇ ಪಿಸ್ತೂಲ್ ತೋರಿಸಿ 205 ಗ್ರಾಂ ಚಿನ್ನಾಭರಣ ಕಳವು

ವಿಜಯಪುರ : ಹಾಡಹಗಲೇ ಪಿಸ್ತೂಲ್ ತೋರಿಸಿ 205 ಗ್ರಾಂ ಚಿನ್ನಾಭರಣ, 1 ಕೆ.ಜಿ ಬೆಳ್ಳಿ ದರೋಡೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ. ಮಹಾರುದ್ರ ಕಂಚಗಾರ್ ಎಂಬುವವರ ಚಿನ್ನದಂಗಡಿಯಲ್ಲಿ ದರೋಡೆಯಾಗಿದ್ದು, ಖದೀಮರು ಅಂಗಡಿಗೆ ನುಗ್ಗಿ ಚಿನ್ನ, ಬೆಳ್ಳಿ ದೋಚಿಕೊಂಡು ಹೋದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಂಗಡಿಗೆ ನುಗ್ಗಿದ ಇಬ್ಬರು ಮುಸುಕುಧಾರಿಗಳು ಮೊದಲು ಸ್ಥಳೀಯರನ್ನು ಹೆದರಿಸಿದ್ದು, ಆನಂತರ ಮಾಲೀಕನಿಗೆ ಪಿಸ್ತೂಲ್ ತೋರಿಸಿ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಅಂಗಡಿಯಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯನ್ನು ದೋಚಿಕೊಂಡಿದ್ದಾರೆ.

ಈ ವೇಳೆ ದರೋಡೆಯ ದೃಶ್ಯ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದ ಓರ್ವ ವ್ಯಕ್ತಿಗೆ ಗುಂಡು ಹಾರಿಸಿದ್ದು, ಅದು ತಪ್ಪಾಗಿ ಪಕ್ಕದಲ್ಲಿದ್ದ ಆತ್ಮಲಿಂಗ ಹೂಗಾರ ಎಂಬ ವ್ಯಕ್ತಿಗೆ ತಗುಲಿದೆ. ಸದ್ಯ ಗಾಯಾಳುವನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದಾರೆ.

ಇನ್ನೂ ಖದೀಮರು ಗುರುತು ಪತ್ತೆಯಾಗದಿರಲಿ ಎಂದು ತಲೆಗೆ ಹೆಲ್ಮೆಟ್, ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದರು. ಫಿಂಗರ್ ಪ್ರಿಂಟ್ ಸಹ ಮೂಡದಂತೆ ಕೈಗೆ ಗ್ಲೌಜ್ ಧರಿಸಿದ್ದರು. ದರೋಡೆಗೆ ಕಪ್ಪು ಬಣ್ಣದ ಯುನಿಕಾರ್ನ್ ಬೈಕ್ ಬಳಕೆ ಮಾಡಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, 205 ಗ್ರಾಂ ಚಿನ್ನಾಭರಣ, 1 ಕೆ.ಜಿ ಬೆಳ್ಳಿಯನ್ನ ದರೋಡೆ ಮಾಡಿರೋದು ಬೆಳಕಿಗೆ ಬಂದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಸಿಕ್ಕಿರೋ ದೃಶ್ಯಗಳನ್ನ ಆಧಾರವಾಗಿಟ್ಟುಕೊಂಡು ಪೊಲೀಸರು ದರೋಡೆಕೋರರ ಬೆನ್ನಟ್ಟಿದ್ದಾರೆ.

ದರೋಡೆಕೋರರು ಚಿನ್ನ ದೋಚಿ ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದು, ಹಲಸಂಗಿ ಗಡಿ ಗ್ರಾಮವಾಗಿದ್ದು ನೆರೆಯ ಮಹಾರಾಷ್ಟ್ರದಿಂದ ಬಂದ ದರೋಡೆಕೋರರೆ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular