ಬೆಂಗಳೂರು : ರಾಜಕೀಯ ಬೆಳವಣಿಗೆಯೊಂದರಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿಯಾಗಿದ್ದಾರೆ. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ಬಿ.ವೈ. ವಿಜಯೇಂದ್ರ ಭೇಟಿಯಾಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜಕಾರಣದಲ್ಲಿ ಶತ್ರುವಿನ ಶತ್ರು ಮಿತ್ರ ಎಂಬಂತೆ ವಿಜಯೇಂದ್ರ ಮತ್ತು ಸತೀಶ್ ಜಾರಕಿಹೊಳಿ ಭೇಟಿ ನಾನಾ ಅರ್ಥಗಳನ್ನು ಹುಟ್ಟು ಹಾಕಿದೆ. ಮೇಲ್ನೋಟಕ್ಕೆ ತಮ ಸ್ವಕ್ಷೇತ್ರ ಶಿಕಾರಿಪುರದ ಸ್ಥಳೀಯ ಸಮಸ್ಯೆಗಳ ಕುರಿತು ವಿಜಯೇಂದ್ರ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ ಎಂದರೂ ಏಕಾಏಕಿ ಇಬ್ಬರು ಪ್ರಭಾವಿ ನಾಯಕರ ಗುಪ್ತ ಭೇಟಿ ಸಹಜವಾಗಿ ಕುತೂಹಲ ಕೆರಳಿಸುವಂತೆ ಮಾಡಿದೆ.
ಸತೀಶ್ ಜಾರಕಿಹೊಳಿ ಭೇಟಿಗೂ ಮುನ್ನ ಮಾತನಾಡಿದ ಬಿ.ವೈ. ವಿಜಯೇಂದ್ರ, ಲೋಕೋಪಯೋಗಿ ಇಲಾಖೆಯ ಕಾರ್ಯದ ನಿಮಿತ್ತ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗುತ್ತಿದ್ದೇನೆ. ಇದರಲ್ಲಿ ರಾಜಕೀಯ ಮಾಡಬೇಡಿ ಎಂದು ತಿಳಿಸಿದ್ದಾರೆ.
ಭೇಟಿ ಬಳಿಕ ಮಾತನಾಡಿದ ವಿಜಯೇಂದ್ರ, ನಮ್ಮ ಕ್ಷೇತ್ರದ ಮುಖಂಡರೊಂದಿಗೆ ಸಚಿವರನ್ನು ಭೇಟಿ ಮಾಡಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಎರಡು ಹೈವೇ ಟೋಲ್‌ಗಳು ಬಂದಿವೆ. ಇದರಿಂದ ಮೂರು ಜಿಲ್ಲೆಗಳ ಜನರಿಗೆ ಸಮಸ್ಯೆ, ಬಡವರಿಗೆ ತೊಂದರೆ ಆಗುತ್ತಿದೆ. ಟೋಲ್ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದೇವೆ. ಸಚಿವರು ಅಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇನೆ ಎಂದಿದ್ದಾರೆ ಎಂದು ತಿಳಿಸಿದರು.