ಗುಂಡ್ಲುಪೇಟೆ: ತಾಲೂಕಿನ ದೇಶಿಪುರ ಗ್ರಾಮದಲ್ಲಿ ಪಾರ್ವತಮ್ಮನವರ ಕೊಂಡ ಮಹೋತ್ಸವ ಮತ್ತು ಜಾತ್ರೆ ಸಾವಿರಾರು ಭಕ್ತದ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ ಹಿನ್ನಲೆಯಲ್ಲಿ ಗ್ರಾಮಸ್ಥರು ಸೋಮವಾರ ರಾತ್ರಿ ಗ್ರಾಮದಿಂದ ಛತ್ರಿ, ಚಾಮರ ಮುಂತಾದ ಸಕಲ ಮರ್ಯಾದೆಗಳು ಮತ್ತು ಕನ್ನ ಕನ್ನಡಿ, ನಂದಿ ಧ್ವಜ, ಮಂಗಳವಾದ್ಯದೊಂದಿಗೆ ಅಮ್ಮನವರ ಉತ್ಸವ ಮೂರ್ತಿಯನ್ನು ಆಭರಣಗಳೊಡನೆ ಕಾಡಿನಲ್ಲಿರುವ ದೇವಾಲಯಕ್ಕೆ ಕೊಂಡೋಯ್ದರು. ಅಲ್ಲಿ ಅಮ್ಮನವರ ಮೂರ್ತಿಯನ್ನು ಚಿನ್ನಾಭರಣಗಳಿಂದ ಅಲಂಕರಿಸಿ, ಪೂಜಾ ಕಾರ್ಯಗಳನ್ನು ನೆರವೇರಿಸÀಲಾಯಿತು. ನಂತರ ಭಕ್ತರು ಬಾಯಿ ಬೀಗ, ಇತರೆ ಹರಕೆಗಳನ್ನು ಒಪ್ಪಿಸಿದರು. ಮಂಗಳವಾರ ಬೆಳಗಿನ ಜಾವ ಕೊಂಡೋತ್ಸವ ಜರುಗಿತು. ನಂತರ ಎಡೆಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನೆರವೇರಿಸಿದರು.
ಮಂಗಳವಾರ ಬೆಳಗ್ಗೆ ಗ್ರಾಮದಲ್ಲಿ ಅಲಂಕೃತ ಹೂವಿನ ಮಂಟಪದಲ್ಲಿ ಅಮ್ಮನವರ ಉತ್ಸವ ಮೂರ್ತಿ ಅಡ್ಡಪಲ್ಲಕ್ಕಿಯಲ್ಲಿರಿಸಿ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ನಂದಿಧ್ವಜ, ವೀರಭದ್ರ ಕುಣಿತ, ಮಂಗಳವಾದ್ಯ, ತಮಟೆ ಇತರೆ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಜಾತ್ರೆ ಮಹೋತ್ಸವ ಹಿನ್ನೆಲೆ ದೇಶಿಪುರ ಗ್ರಾಮಕ್ಕೆ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಭಕ್ತಾದಿಗಳು ಭಾಗವಹಿಸಿ ಪೂಜೆ ಸಲ್ಲಿಸಿದರು.