ಬೆಂಗಳೂರು: ವಿಕ್ರಂಗೌಡ ಹಲವು ನಕ್ಸಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದು, ನಕ್ಸಲ್ ಚಟುವಟಿಕೆಯನ್ನು ನಿಗ್ರಹಿಸಲು ಆತನನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಕ್ಸಲ್ ಚಟುವಟಿಕೆಯಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದ ವಿಕ್ರಂಗೌಡ ಅವರು ಎನ್ ಕೌಂಟರ್ ನಲ್ಲಿ ಹತನಾಗಿರುವ ಬಗ್ಗೆ ಪ್ರಗತಿಪರ ಚಿಂತಕರು ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿಕ್ರಂಗೌಡ ಅವರಿಗೆ ಶರಣಾಗುವಂತೆ ಆದೇಶ ನೀಡಲಾಗಿತ್ತು. ಆದರೆ ಅವರು ಶರಣಾಗಿರಲಿಲ್ಲ. ವಿಕ್ರಂಗೌಡ ಅವರನ್ನು ಹಿಡಿದವರಿಗೆ ಕೇರಳಸರ್ಕಾರ ೨೫ ಲಕ್ಷ ಹಾಗೂ ಕರ್ನಾಟಕ ಸರ್ಕಾರ ೫ ಲಕ್ಷ ಬಹುಮಾನವನ್ನು ಘೋಷಿಸಿತ್ತು ಎಂದು ವಿವರಿಸಿದರು.
ನವದೆಹಲಿ ಪ್ರವಾಸದ ವಿವರ ನೀಡಿದ ಮುಖ್ಯಮಂತ್ರಿಗಳು, ನಾಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲು ಸಮಯ ಕೋರಲಾಗಿದೆ. ರಾಜ್ಯಕ್ಕೆ ನಬಾರ್ಡ್ ನಿಂದ ರಾಜ್ಯಕ್ಕೆ ನೀಡಲಾಗುವ ಸಾಲದ ಮೊತ್ತವನ್ನು ಕಳೆದ ವರ್ಷದ ೫೬೦೦ ಕೋಟಿ ರೂ.ಗಳಿಂದ , ಈ ವರ್ಷ ೨೩೪೦ ಕೋಟಿ ರೂ. ಗಳಿಗೆ ಇಳಿಸಲಾಗಿದೆ. ಆದ್ದರಿಂದ ಕೇಂದ್ರ ವಿತ್ತ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿಕೊಳ್ಳಲಾಗುವುದು. ಈ ಮಧ್ಯೆ ಸಮಯಾವಕಾಶವಿದ್ದಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲಾಗುವುದು ಎಂದರು.