ಯಳಂದೂರು: ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಧರಣಿಗೆ ಯಳಂದೂರು ತಾಲೂಕಿನ ಆಡಳಿತ ಅಧಿಕಾರಿಗಳ ಸಂಘವೂ ಬೆಂಬಲ ಸೂಚಿಸಿ ತಮ್ಮ ಕರ್ತವ್ಯಕ್ಕೆ ಗೈರಾಗಿ ತಹಶೀಲ್ದಾರ್ ಕಚೇರಿ ಮುಂಭಾಗ ಶಾಂತಿಯುತ ಅನಿರ್ದಿಷ್ಟಾವಧಿ ಮುಷ್ಕರವನ್ನು ಬುಧವಾರದಿಂದ ಆರಂಭಿಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ನಂದಕುಮಾರ್ ಮಾತನಾಡಿ, ಕಳೆದ ವರ್ಷ ಸೆ.೨೬ ರಿಂದ ಅ.೦೩ ರವರೆಗೆ ನಮ್ಮ ಸಂಘದ ವತಿಯಿಂದ ನಮ್ಮ ಬೇಡಿಕೆಗಳಿಗೆ ರಾಜ್ಯಾದ್ಯಂತ ಮುಷ್ಕರ ನಡೆಸಿತ್ತು. ಆಗ ಕಂದಾಯ ಇಲಾಖೆಯ ಸರ್ಕಾರ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಲಾಗಿತ್ತು. ಆದರೆ ಅದು ಇಂದಿಗೂ ಜಾರಿಗೆ ತಂದಿಲ್ಲ.
ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ೫೧.೫ ಲಕ್ಷ ಮೃತ ಖಾರೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರಿಗೆ ಪೌತಿ ಖಾತೆ ದಾಖಲಿಸುವ ಇ-ಪೌತಿ ಖಾತಾ ಆಂದೋಲನ ಕೈ ಬಿಡಬೇಕು, ಚಿಕ್ಕಮಗಳೂರು ಜಿಲ್ಲೆಯಲ್ಲಿ ೩೦ ಗ್ರಾಮ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿಯನ್ನು ತಡೆದು ನೈಸರ್ಗಿಕ ನ್ಯಾಯ ತತ್ವಗಳನ್ನು ಹಾಗೂ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಹೊರಿಡಿಸಿರುವ ದಂಡನಾ ಆದೇಶವನ್ನು ಈ ಕೂಡಲೇ ಹಿಂಪಡೆಯುವುದು. ಅಂತರ್‌ಜಿಲ್ಲಾ ವರ್ಗಾವಣೆಯಲ್ಲಿ ಇತರೆ ಇಲಾಖೆಯಲ್ಲಿರುವಂತೆ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿಯನ್ನು ರಚಿಸಬೇಕು, ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಬೇಕು, ಜಿಲ್ಲಾ ಮಟ್ಟದ ಜೇಷ್ಟತೆಯನ್ನಾಗಿ ಪರಿವರ್ತಿಸುವುದೂ ಸೇರಿದಂತೆ ೨೩ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಅನಿರ್ದಿಷ್ಟಾವಧಿಗೆ ನಮ್ಮ ಮುಷ್ಕರ ಮುಂದುವರೆಯಲಿದೆ ಎಂದರು.
ಜಿಲ್ಲಾ ಗೌರವಾಧ್ಯಕ್ಷ ಮಹೇಶ್, ಪ್ರವೀಣ್‌ಕುಮಾರ್, ಕೆ.ಆರ್. ಶರತ್‌ಗೌಡ, ಸುಹಾಸ್, ಲೀಲಾವತಿ, ಚೈತ್ರಾ, ಕಾಳಮ್ಮ, ಸುಕನ್ಯ, ಸುನೀತಾ, ಮಹದೇವಸ್ವಾಮಿ ಸೇರಿದಂತೆ ಅನೇಕರು ಇದ್ದರು.