ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ನೀಡುತ್ತಾರೆಂಬ ಕಾರಣಕ್ಕಾಗಿ ಕಳೆದ ೨೦ ವರ್ಷಗಳಿಂದ ಅಭಿವೃದ್ದಿಯಿಂದ ವಂಚಿತಗೊಂಡಿರುವ ಸಾಲಿಗ್ರಾಮ ತಾಲೂಕು ಗೇರುದಡ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ದಿಗೊಳಿಸಬೇಕೆಂದು ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದಲ್ಲಿ ಶಾಸಕ ಡಿ.ರವಿಶಂಕರ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಗ್ರಾಮದಿಂದ ತಾಲೂಕು ಕೇಂದ್ರ ಸಾಲಿಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೇರಿದಂತೆ ಗ್ರಾಮ ಪರಿಮಿತಿಯಲ್ಲಿ ಸಿಸಿ ರಸ್ತೆಗಳನ್ನು ಮಾಡಿಸಿಕೊಡಬೇಕೆಂದು ಕೇಳಿಕೊಂಡ ಗ್ರಾಮಸ್ಥರು ಸಮಪರ್ಕವಾಗಿ ಕುಡಿಯುವ ನೀರು ಸರಬರಾಜು ಮಾಡಬೇಕು, ದೇವಸ್ಥಾನಗಳ ಜೀರ್ಣೋದ್ದಾರ ಹಾಗೂ ಕನಕದಾಸರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮುದಾಯ ಭವನ ನಿರ್ಮಾಣ ಮಾಡಲು ಅನುದಾನ ನೀಡಬೇಕು ಎಂದು ಕೋರಿದರು.
ಗ್ರಾಮದ ಸಾರ್ವಜನಿಕ ಸ್ಮಶಾನಕ್ಕಾಗಿ ೧.೨೦ ಎಕರೆ ಜಮೀನು ಮೀಸಲಿರಿಸಿದ್ದರು ಈವರೆಗೂ ಅಧಿಕಾರಿಗಳು ಸ್ಥಳ ಇರುವುದನ್ನು ಗ್ರಾಮದವರಿಗೆ ತೋರಿಸಿಲ್ಲ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಆಶ್ರಯ ಮನೆಗಳು ಸೇರಿದಂತೆ ಕೊಠಡಿಗಳ ನಿರ್ಮಾಣ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ಸಹಕಾರ ನೀಡುತ್ತಿಲ್ಲ ಎಂದು ದೂರಿದ ಸಾರ್ವಜನಿಕರು ಸ್ಥಳಾಂತರಗೊಂಡ ಗೇರುದಡ ನಿವಾಸಿಗಳಿಗೆ ಈವರೆಗೂ ಮನೆಯ ಹಕ್ಕು ಪತ್ರಗಳನ್ನು ನೀಡಿಲ್ಲ ಎಂದು ಆರೋಪಿಸಿದರು.
ಆನಂತರ ಶಾಸಕ ಡಿ.ರವಿಶಂಕರ್ ಮಾತನಾಡಿ ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಅದಕ್ಕಾಗಿ ಚೆಸ್ಕಂ ಇಲಾಖೆಯಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಸಮಪರ್ಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ವಹಿಸಬೇಕು ಎಂದು ಕುಡಿಯುವ ನೀರು ಮತ್ತು ನೈಮರ್ಲ್ಯ ಇಲಾಖೆಯ ಎಇಇ ಅವರಿಗೆ ಸೂಚಿಸಿದರು.
ಕಂದಾಯ ಮತ್ತು ಸರ್ವೆ ಇಲಾಖೆಯವರು ನಾಳೆಯಿಂದಲೇ ಸ್ಮಶಾನದ ಜಾಗವನ್ನು ಗುರುತಿಸಿ ಅಳತೆ ಮಾಡಿ ಬೌಂಡ್ರಿ ನಿಗದಿ ಮಾಡಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಬೇಕು ಎಂದು ತಾಕೀತು ಮಾಡಿದ ಶಾಸಕರು ಗ್ರಾಮ ಪಂಚಾಯಿತಿಯವರು ನರೇಗಾ ಯೋಜನೆಯಡಿಯಲ್ಲಿ ಸ್ಮಶಾನಕ್ಕೆ ತಂತಿ ಬೇಲಿ ನಿರ್ಮಾಣ
ಮಾಡಿ ಸ್ಮಶಾಸನ ಅಭಿವೃದ್ದಿ ಪಡಿಸಬೇಕು ಎಂದು ಆದೇಶಿಸಿದರು.
ಗ್ರಾಮದ ಎರಡು ದೇವಾಲಯದ ಜೀರ್ಣೋದ್ದಾರಕ್ಕಾಗಿ ಈಗಾಗಲೇ ಅನುದಾನ ನೀಡಲಾಗಿದ್ದು ಅರಳಿಮರದ ಕಟ್ಟೆಯ ನಿರ್ಮಾಣಕ್ಕೂ ಎರಡು ಲಕ್ಷ ನೀಡಲಾಗುತ್ತದೆ ಎಂದರಲ್ಲದೆ ಗ್ರಾಮ ಪರಿಮಿತಿಯಲ್ಲಿ ಸಿಸಿ ರಸ್ತೆ ಮಾಡಲು ೨೫ ಲಕ್ಷ ರೂ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದ ಶಾಸಕ ಡಿ.ರವಿಶಂಕರ್ ಎರಡು ಸಮುದಾಯಗಳ ಭವನ ನಿರ್ಮಾಣಕ್ಕೆ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅನುದಾನ ಕೊಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳನ್ನು ಡಾಂಬರೀಕರಣ ಮಾಡಿಸಲು ಲೋಕೋಪಯೋಗಿ ಸಚಿವರಿಗೆ ಅನುದಾನ ನೀಡುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಎಂದರಲ್ಲದೆ ಆಶ್ರಯ ಮನೆಗಳ ಹಕ್ಕು ಪತ್ರ ವಿತರಣೆ ಸಂಬಂಧಿಸಿದ ವಿಚಾರ ರಾಜ್ಯ ಮಟ್ಟದ ಸಮಸ್ಯೆಯಾಗಿದ್ದು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಗ್ರಾಮೀಣಾಭಿವೃದ್ದಿ ಮತ್ತು ಕಂದಾಯ ಸಚಿವರ ಜೊತೆ ಮಾತನಾಡಿ ಶಾಶ್ವತ ಪರಿಹಾರ ನೀಡಲಾಗುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್, ಮುಖಂಡರಾದ ಸಿ.ಪಿ.ರಮೇಶ್, ಪುಟ್ಟಸ್ವಾಮಿಗೌಡ, ತಾಯಮ್ಮಜವರಯ್ಯ, ಸುರೇಶ್, ಶಶಿಕಲಾರವಿ, ಜಿ.ಸಿ.ಪ್ರಕಾಶ್, ಮಹದೇವ್, ಜಿ.ಬಿ.ಸ್ವಾಮಿ, ಪತ್ರಕರ್ತ ಜಿ.ಕೆ.ನಾಗಣ್ಣ, ಸಾಲಿಗ್ರಾಮ ತಾಲೂಕು ತಹಶೀಲ್ದಾರ್ ಎಸ್.ನರಗುಂದ್, ಇಒ ರವಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ರವಿಶಂಕರ್ ಅಭಿನಂದಿಸಿದ ಮೆಡಿಕಲ್ ಹರೀಶ್ : ಇದೇ ಸಂದರ್ಭದಲ್ಲಿ ಕೆ ಆರ್.ನಗರ ತಾಲೂಕು ಗಂಧನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮುಖಂಡರಾದ ಮೆಡಿಕಲ್‌ಹರೀಶ್ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಎಂಬ ಕಾರ್ಯಕ್ರಮ ಮಾಡುತ್ತಿರುವ ಶಾಸಕ ಡಿ.ರವಿಶಂಕರ್ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ್,
ನಿರ್ದೇಶಕ ಡಿ.ಆರ್.ರಾಹುಲ್, ಮುಖಂಡರಾದ ಹೆಚ್.ಕೆ.ಬುಡಿಗೌಡ, ಮುರುಳಿ, ದೊಡ್ಡಕೊಪ್ಪಲುರವಿ, ಮಂಜುನಾಥ್, ದೇವರಾಜು ಮತ್ತಿತರರು ಹಾಜರಿದ್ದರು.