ಯಳಂದೂರು: ಚಾಮರಾಜನಗರ ತಾಲೂಕಿನ ಹುಲ್ಲೇಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಎಸ್.ಜಿ.ಭಾಗ್ಯವತಿ ಯವರಿಗೆ ಗ್ರಾಮಸ್ಥರು ಹೃದಯಸ್ಪರ್ಶಿಯಾಗಿ ಬೀಳ್ಕೊಡುಗೆ ಸಮಾರಂಭವನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಿದರು.
ಹುಲ್ಲೇಪುರ ಗ್ರಾಮಸ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಿಕ್ಷಕಿಯ ಬೀಳ್ಕೂಡುಗೆ ಸಮಾರಂಭಕ್ಕೆ ಗ್ರಾಮಸ್ಥರು ಅದ್ಧೂರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಬಿಆರ್‌ಪಿ ಸವಿತ ಮಾತನಾಡಿ, ಗ್ರಾಮದಲ್ಲಿ ಮಕ್ಕಳಿಗೆ ಪಾಠ ಪ್ರವಚನ ಮಾಡುವುದ ಜತೆಗೆ ಎಲ್ಲರ ಜತೆಗೆ ಸ್ನೇಹದಿಂದ ಚಟುವಟಿಕೆಗಳಿಗೆ ಸಹಕಾರ ಪ್ರೋತ್ಸಾಹಗಳನ್ನು ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸುತ್ತಿದ್ದರು.
ಈ ರೀತಿಯ ಗುಣ, ಲಕ್ಷಣಗಳನ್ನು ಬೆಳೆಸಿಕೊಂಡು ಗ್ರಾಮದ ಸಾವಿರಾರು ಜನರಿಗೆ ಊಟ ಮಾಡಿಸಿ ಕಾರ್ಯಕ್ರಮವನ್ನು ಮಾಡುವ ಮೂಲಕ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿರುವ ಈ ಗ್ರಾಮದ ಜನರೊಂದಿಗೆ ಇವರ ಒಡನಾಟ ಎಷ್ಟಿತ್ತೆಂದು ಅರ್ಥವಾಗುತ್ತದೆ. ಈ ಶಾಲೆಯಲ್ಲಿ ಎಸ್.ಜಿ.ಭಾಗ್ಯವತಿ ರವರು ಮಕ್ಕಳಿಗೆ ಮನಮುಟ್ಟುವಂತೆ ಬೋಧಿಸುತ ಎಲ್ಲರಿಗೂ ಅಚ್ಚುಮೆಚ್ಚು ಮಾತಿನಿಂದಲೇ ವಿದ್ಯಾರ್ಥಿಗಳ, ಪೋಷಕರ ಮನ ಗೆಲ್ಲುತ್ತಿದ್ದರು. ಉತ್ತಮ ಬೋಧನೆ ಮೂಲಕ ವಿದ್ಯಾರ್ಥಿಗಳ ಮನಃ ಪರಿವರ್ತನೆಗೆ ಕಾರಣವಾಗಿದ್ದರು. ಇವರಿಂದ ಕಲಿತ ವಿದ್ಯಾರ್ಥಿಗಳು ಇಂದು ಉನ್ನತ ವ್ಯಾಸಂಗ ಮಾಡಲು ಇವರು ಪ್ರೇರಣೆಯಾಗಿದ್ದಾರೆ. ಜನ ಮೆಚ್ಚಿದ ಶಿಕ್ಷಕ ಎನಿಸಿಕೊಳ್ಳುವುದು ಕಷ್ಟವಾಗಿರುವ ಈ ಕಾಲದಲ್ಲಿ ಜನರಿಂದಲೇ ಹೃದಯಸ್ಪರ್ಶಿ ಬೀಳ್ಕೂಡುಗೆ ಪಡೆದುಕೊಳ್ಳುತ್ತಿರುವುದು ಇವರ ಜನಪ್ರಿಯತೆಗೆ ಕಾರಣವಾಗಿದೆ ಎಂದರು.
ಬೀಳ್ಕೂಡುಗೆ ಸ್ವೀಕರಿಸಿ ಎಸ್.ಜಿ. ಭಾಗ್ಯವತಿ ಮಾತನಾಡಿ, ಈ ಗ್ರಾಮದವರು ನನ್ನ ಮೇಲಿಟ್ಟಿರುವ ಅಪಾರ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ. ನಾನು ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಇಲ್ಲಿನ ವಿದ್ಯಾರ್ಥಿಗಳು, ಪೋಷಕರು, ಸಹ ಶಿಕ್ಷಕರು ನನ್ನ ಕರ್ತವ್ಯಕ್ಕೆ ನನಗೆ ಬೆಂಬಲವಾಗಿ ನಿಂತಿದ್ದರು. ನನ್ನ ಮೇಲಿಟ್ಟಿದ್ದ ಪ್ರೀತಿ ವಿಶ್ವಾಸವನ್ನು ನಂತರ ಬರುವ ಶಿಕ್ಷಕರ ಮೇಲಿಟ್ಟು ಅವರಿಗೂ ನೀಡಿ, ನಿಮ್ಮ ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬೇಡಿ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜು, ಗ್ರಾ.ಪಂ.ಸದಸ್ಯರಾದ ಮಂಜು, ಶಶಿಧರ್, ಯಜಮಾನರಾದ ಸಿದ್ದರಾಜು, ಮಾದೇಶ್, ಮಹೇಶ್, ಕುಮಾರಸ್ವಾಮಿ, ಗೋವಿಂದಶೆಟ್ಟಿ, ಮಹದೇವಶೆಟ್ಟಿ, ಮಂಗಳಮ್ಮ, ಗ್ರಾ.ಪಂ. ಪಿಡಿಒ ಆದಿಶೇಷ, ಬಿಲ್‌ಕಲೆಕ್ಟರ್ ಕೃಷ್ಣ, ಬಿಆರ್‌ಪಿ ಮಹದೇವಪ್ಪ, ಸಿಆರ್‌ಪಿ ಶಿವಮೂರ್ತಿ, ರೇಚಣ್ಣ, ಪ್ರೌಢಶಾಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಮಾದಪ್ಪ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ರಾಮಸ್ವಾಮಿ, ಮಹದೇವಸ್ವಾಮಿ, ಭರತ್‌ಭೂಷಣ್, ಕೃಷ್ಣಮೂರ್ತಿ, ಸುಧಾ, ನಿರ್ಮಲ, ಸಿದ್ದಲಿಂಗಮೂರ್ತಿ, ಚಿನ್ನಸ್ವಾಮಿ, ಶಾಂತರಾಜು ಸೇರಿದಂತೆ ಗ್ರಾಮಸ್ಥರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.