ಗುಂಡ್ಲುಪೇಟೆ: ಕೂತನೂರು ಪಿಡಿಓ ಗೈರು ಹಾಜರು ಹಾಗೂ ನೌಕರರ ಅಸಮರ್ಪಕ ಕಾರ್ಯ ನಿರ್ವಹಣೆ ಖಂಡಿಸಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮಸ್ಥರು, ಯುವ ಮುಖಂಡರು ಪ್ರತಿಭಟನೆ ನಡೆಸಿದರು.
ತಾಲೂಕಿನ ಕೂತನೂರು ಗ್ರಾಮ ಪಂಚಾಯಿತಿ ಮುಂದೆ ಸಮಾವೇಶಗೊಂಡ ಗ್ರಾಮಸ್ಥರು, ಗ್ರಾಪಂ ಪಿಡಿಓ, ನೌಕರರ ವರ್ಗ ಹಾಗೂ ಸದಸ್ಯರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾನಿರತರು, ಕೂತನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರಂತರ ಕರ್ತವ್ಯಕ್ಕೆ ಗೈರಾಗುತ್ತಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರು, ಪಿ.ಓ ಮತ್ತು ಬಿಲ್ ಕಲೆಕ್ಟರ್ ನಡುವೆ ಪ್ರತಿದಿನ ಜಗಳವಾಗುತಿದೆ. ಇದರಿಂದ ಗ್ರಾಮದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಅಧಿಕಾರಿಯೇ ಇಲ್ಲದ ಕಾರಣ ನೌಕರರು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಕಾಟಾಚಾರಕ್ಕೆ ಎಂಬಂತೆ ಕಚೇರಿ ಬಾಗಿಲು ತೆರೆಯಲಾಗುತ್ತಿದೆ. ಇದರಿಂದ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಈಕಾರಣದಿಂದ ಗ್ರಾಮ ಪಂಚಾಯಿತಿ ಇದ್ದೂ ಇಲ್ಲದಂತಿದೆ. ಬೀದಿ ದೀಪ ಕೆಟ್ಟು ನಿಂತಿವೆ. ಚರಂಡಿ ಹೂಳು ತುಂಬಿವೆ. ಅನೈರ್ಮಲ್ಯ ತಾಂಡವವಾಡುತ್ತಿದೆ. ಅನುದಾನವಿದ್ದರೂ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರೂ ಸೇರಿ ಪ್ರತಿಭಟನೆ ನಡೆಸಿದರೂ ಸಮಸ್ಯೆ ಬಗೆಹರಿಸುವ ಕಡೆಗೆ ತಾಲೂಕು ಪಂಚಾಯಿತಿ ಇಒ ಗಮನ ನೀಡುತ್ತಿಲ್ಲ. ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಜನರೆದುರು ಭರವಸೆ ನೀಡಿ ಸುಮ್ಮನಾಗುತ್ತಾರೆ. ಆದ್ದರಿಂದ ಸಮಸ್ಯೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಗಮನ ನೀಡಬೇಕು. ಇಲ್ಲವಾದಲ್ಲಿ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಶಿವನಾಗಶೆಟ್ಟಿ, ಗಣೇಶ, ಶಶಿ, ಮಣಿ, ಸಿದ್ದರಾಜು, ಸ್ವಾಮಿ, ರಾಜು, ಕೃಷ್ಣ, ರಾಜಪ್ಪ, ಮೂರ್ತಿ ಸೇರಿದಂತೆ ಹಲವು ಮಂದಿ ಗ್ರಾಮಸ್ಥರು ಹಾಜರಿದ್ದರು.