ಕೆ.ಆರ್.ನಗರ: ಕೆ.ಆರ್.ನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವಿನಯ್.ದೊಡ್ಡಕೊಪ್ಪಲು, ಪ್ರಧಾನ ಕಾರ್ಯದರ್ಶಿಯಾಗಿ ಭೇರ್ಯ ಮಹೇಶ್ ಚುನಾವಣೆಯಲ್ಲಿ ಲಾಟರಿ ಮೂಲಕ ಆಯ್ಕೆಯಾದರು.
೨೦೨೩- ೨೫ ನೇ ಸಾಲಿಗೆ ಎರಡು ಅವಧಿಗೆ ನಡೆದ ತಾಲ್ಲೂಕು ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿನಯ್.ದೊಡ್ಡಕೊಪ್ಪಲು ಮತ್ತು ಪಂಡಿತ್ ನಾಟೀಕರ್, ಉಪಾಧ್ಯಕ್ಷ ಸ್ಥಾನಕ್ಕೆ ಸಾಲಿಗ್ರಾಮ ಹರೀಶ್ ಮತ್ತು ಸಿ.ಸಿ.ಮಹದೇವ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭೇರ್ಯ ಮಹೇಶ್ ಮತ್ತು ಕೆ.ಶಂಕರ್, ಇನ್ನು ಖಜಾಂಚಿ ಸ್ಥಾನಕ್ಕೆ ಚೈತನ್ಯ.ಎ ಮತ್ತು ನಾಗೇಗೌಡ ನಾಮಪತ್ರಸಲ್ಲಿಸಿದ್ದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿನಯ್ ದೊಡ್ಡಕೊಪ್ಪಲು ಮತ್ತು ಪಂಡಿತ್ ನಾಟೀಕರ್ ತಲಾ ೧೨ ಮತಗಳನ್ನು ಪಡೆದು ಕೊಂಡು ಸಮಬಲ ಇದ್ದಾಗ ಕೊನೆಗೆ ಲಾಟರಿ ಮೂಲಕ ಅಧ್ಯಕ್ಷರಾಗಿ ವಿನಯ್ ಡಿ.ಜೆ. ಆಯ್ಕೆಯಾದರೆ, ಪ್ರಧಾನ ಕಾರ್ಯದರ್ಶಿ ಸ್ಥಾನ ಕೂಡ ಭೇರ್ಯ ಮಹೇಶ್ ಹಾಗೂ ಕೆ.ಶಂಕರ್ ನಡುವೆ ಸಮಬಲ ೧೨ ಮತಗಳು ಬಂದಾಗ ಕೊನೆಗೆ ವಿಜಯದ ಮಾಲೆ ಲಾಟರಿ ಮೂಲಕ ಭೇರ್ಯ ಮಹೇಶ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಸಿ.ಸಿ.ಮಹದೇವ್ ೧೪ ಮತಗಳನ್ನು ಪಡೆದು ಕೊಂಡು ಆಯ್ಕೆಯಾದರೆ, ಸಾಲಿಗ್ರಾಮ ಹರೀಶ್ ೯ ಮತಗಳನ್ನು ಪಡೆದು ಪರಾಭವಗೊಂಡರು. ಖಜಾಂಚಿ ಸ್ಥಾನಕ್ಕೆ ನಾಗೇಗೌಡ ೧೩ ಮತಗಳನ್ನು ಪಡೆದು ಆಯ್ಕೆಯಾದರೆ ಪ್ರತಿ ಸ್ಪರ್ಧಿ ಚೈತನ್ಯ ಎ. ೧೧ ಮತಗಳನ್ನು ಪಡೆದು ಕೊಂಡು ಪರಾವಭಗೊಂಡರು. ಕಾರ್ಯದರ್ಶಿಯಾಗಿ ಆನಂದ್ ಹೊಸೂರು ಅವಿರೋಧವಾಗಿ ಆಯ್ಕೆಯಾದರು.
ಇನ್ನೂ ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸ್ಪಿನ್ ಕೃಷ್ಣಮೂರ್ತಿ, ಚುಂಚನಕಟ್ಟೆ.ಮಧು, ಡಿ.ಜಿ.ರೋಜಾಮಹೇಶ್, ಮಹಮ್ಮದ್ ಸಬೀರ್ ಖಾನ್, ರಾಮಕೃಷ್ಣೇಗೌಡ, ಕೆ.ಆರ್.ಶ್ರೀನಿವಾಸ್, ಯೋಗಾನಂದ್ ಎಸ್. ಆಯ್ಕೆಯಾಗಿದ್ದಾರೆ.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ನೂತನ ಅಧ್ಯಕ್ಷ ವಿನಯ್ ದೊಡ್ಡಕೊಪ್ಪಲು ಹಾಗು ಪ್ರಧಾನ ಕಾರ್ಯದರ್ಶಿ ಭೇರ್ಯ ಮಹೇಶ್ ಅವರಿಗೆ ಶಾಲು ಹೊದಿಸಿ ಅಭಿನಂದಿಸಿ ಶುಭಾಶಯ ಕೋರಿ , ಮಾತನಾಡಿದ ಅವರು ಚುನಾವಣೆ ಎಂದ ಮೇಲೆ ಸೋಲು ಗೆಲವು ಇದ್ದೆ ಇರುತ್ತೆ, ಸಂಘದಲ್ಲಿ ಸಾಮರಸ್ಯದಿಂದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ವಿಶ್ವಾಸ ಮೂಲಕ ಸಂಘದ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳು ಮಾಡಬೇಕು ಎಂದು ಸಲಹೆ ನೀಡಿದರು.
ನಿಕಟ ಪೂರ್ವ ಅಧ್ಯಕ್ಷ ವಿ.ಸಿ.ಶಿವರಾಮು ಮಾತನಾಡಿ ನೂತನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಅವರುಗಳು ಸಂಘದ ಅಭಿವೃದ್ಧಿಗೆ ಸದಾ ಸಿದ್ದರಾಗಿ ಎಲ್ಲ ಸದಸ್ಯರಿಗೂ ಸರ್ಕಾರ, ರಾಜ್ಯಸಂಘದಿಂದ ಹಾಗೂ ಜಿಲ್ಲಾ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ವ್ಯವಸ್ಥೆ ಮಾಡಲಿ ಎಂದು ಹಾರೈಸಿದರು. ಚುನಾವಣಾಧಿಕಾರಿಯಾಗಿ ಬನ್ನೂರು ರಾಜು ಕಾರ್ಯ ನಿರ್ವಹಿಸಿದರು, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ, ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ ಜಿಲ್ಲಾ ಸಂಘದ ನಾಗೇಶ್, ವಿಶ್ವಾಸ್ ಸಹಕಾರ ನೀಡಿದರು.