ಪ್ಯಾರಿಸ್ : ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತದ ಕುಸ್ತಿಪಟು ವಿನೇಶ್ ಪೋಗಟ್ ಗೆ ಚಿನ್ನದ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ.
ಮಹಿಳಾ ಕುಸ್ತಿ 50 ಕೆಜಿ ತರಗತಿಯಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಸುದ್ದಿಯನ್ನು ಭಾರತೀಯ ತಂಡವು ವಿಷಾದದಿಂದ ಹಂಚಿಕೊಂಡಿದೆ. ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ತೂಕ ಹೊಂದಿದ್ದ ಹಿನ್ನೆಲೆಯಲ್ಲಿ ವಿನೇಶ್ ಪೋಗಟ್ ಅವರನ್ನ ಫೈನಲ್ ನಿಂದ ಅನರ್ಹಗೊಳಿಸಲಾಗಿದೆ.ಇದರಿಂದಾಗಿ ವಿನೇಶ್ ಪೋಗಟ್ ಅವರಿಗೆ ಚೊಚ್ಚಲ ಒಲಂಪಿಕ್ಸ್ ಪದಕ ಕೈ ತಪ್ಪಿದಂತಾಗಿದೆ.
ವಾಸ್ತವವಾಗಿ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವಿನೇಶ್ ಅವರ ತೂಕ ಪರೀಕ್ಷೆಯಲ್ಲಿ ವಿನೇಶ್ ಫೋಗಟ್ ಅವರ ತೂಕವು ನಿಗದಿತ ಮಿತಿಗಿಂತ 100 ಗ್ರಾಂ ಹೆಚ್ಚು ಎಂದು ಕಂಡುಬಂದಿದೆ. ನಿಯಮಗಳ ಪ್ರಕಾರ, ಯಾವುದೇ ಕುಸ್ತಿಪಟುವಿಗೆ ಯಾವುದೇ ವಿಭಾಗದಲ್ಲಿ 100 ಗ್ರಾಂ ಹೆಚ್ಚುವರಿ ತೂಕದ ಭತ್ಯೆ ನೀಡಲಾಗುತ್ತದೆ. ಆದರೆ ವಿನೇಶ್ ಅವರ ತೂಕ ಇದಕ್ಕಿಂತ ಹೆಚ್ಚಿದೆ ಹೀಗಾಗಿ ಅವರು ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ.
ಭಾರತ ತಂಡವು ವಿನೇಶ್ ಅವರ ಖಾಸಗಿತನವನ್ನು ಗೌರವಿಸುವಂತೆ ವಿನಂತಿಸುತ್ತದೆ. ತಂಡ ಇನ್ನು ಕೈಯಲ್ಲಿರುವ ಸ್ಪರ್ಧೆಗಳ ಮೇಲೆ ಕೇಂದ್ರೀಕರಿಸಲು ಬಯಸುತ್ತದೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಪ್ರಕಟಣೆ ಹೊರಡಿಸಿದೆ.