Friday, April 11, 2025
Google search engine

Homeರಾಜಕೀಯನಿವೇಶನ ವಾಪಸ್ ಪಡೆದು ಕೋರ್ಟ್ ಆದೇಶ ಉಲ್ಲಂಘನೆ: ಮುಡಾ ಆಯುಕ್ತರ ಬಂಧನಕ್ಕೆ ಕುಮಾರಸ್ವಾಮಿ ಒತ್ತಾಯ

ನಿವೇಶನ ವಾಪಸ್ ಪಡೆದು ಕೋರ್ಟ್ ಆದೇಶ ಉಲ್ಲಂಘನೆ: ಮುಡಾ ಆಯುಕ್ತರ ಬಂಧನಕ್ಕೆ ಕುಮಾರಸ್ವಾಮಿ ಒತ್ತಾಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಕುಟುಂಬಕ್ಕೆ ಮುಡಾದಿಂದ ನೀಡಿದ್ದ ನಿವೇಶನಗಳನ್ನು ಹಿಂಪಡೆಯುವ ಮೂಲಕ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡುವ ಪ್ರಯತ್ನ ನಡೆದಿದ್ದು, ಈ ಕಾರಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಲೋಕಾಯುಕ್ತ ಪೊಲೀಸರು ಕೂಡಲೇ ಬಂಧಿಸಬೇಕು ಎಂದು ಕೇಂದ್ರ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪತ್ರ ಬರೆದಾಕ್ಷಣ ಅದನ್ನು ಒಪ್ಪಿಕೊಂಡು ತರಾತುರಿಯಲ್ಲಿ ನಿವೇಶನ ಹಿಂಪಡೆಯಲು ಕಾನೂನಿನಲ್ಲಿ ಅವಕಾಶವಿದೆಯೇ? ಎಂದು ಪ್ರಶ್ನಿಸಿದರು.

ಕೆಸರೆ ಗ್ರಾಮದ ಜಮೀನು ತಮ್ಮದು. ಇದಕ್ಕೆ ಬದಲಿಯಾಗಿ ವಿಜಯನಗರದಲ್ಲಿ ನೀಡಿರುವ 14 ನಿವೇಶನಗಳ ಮೌಲ್ಯ 62 ಕೋಟಿ ರೂ.ಗಳಷ್ಟಾಗುತ್ತದೆ. ಅಷ್ಟು ಹಣ ಕೊಟ್ಟು ನಿವೇಶನ ವಾಪಸ್‌‍ ಪಡೆಯಲಿ, ನಾವು ಕಾನೂನುಬದ್ಧವಾದ ಜಮೀನಿನ ಮಾಲೀಕರು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಾದಿಸಿದ್ದರು.ಈಗ ಅದು ಹೇಗೆ ಏಕಾಏಕಿ ನಿವೇಶನಗಳನ್ನು ವಾಪಸ್‌‍ ಮುಡಾಗೆ ದಾನ ಮಾಡಿಬಿಟ್ಟರು? ಎಂದು ಕಿಡಿ ಕಾರಿದರು.

ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಗೊಂಡಿದ್ದು, ಹಗರಣವನ್ನು ಲೋಕಾಯುಕ್ತದ ತನಿಖೆಗೆ ಆದೇಶಿಸಲಾಗಿದೆ. ಹೀಗಾಗಿ ಮುಡಾ ನಿವೇಶನಗಳು ಈಗ ನ್ಯಾಯಾಲಯದ ಆಸ್ತಿ. ಹಾಗಿದ್ದಾಗ ಯಾವ ಆಧಾರದ ಮೇಲೆ ಅವುಗಳನ್ನು ವಾಪಸ್‌‍ ನೀಡಲು ಸಾಧ್ಯ? ಎಂದರು.

ನಿವೇಶನಗಳ ಖಾತಾ ಬದಲಾವಣೆ ಮಾಡುವ ಮೂಲಕ ಸಾಕ್ಷ್ಯನಾಶ ಮಾಡಲು ಯತ್ನಿಸಲಾಗಿದೆ. ತನಿಖೆಯ ದಿಕ್ಕು ತಪ್ಪಿಸಲು ಮುಖ್ಯಮಂತ್ರಿಯವರು ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಿವೇಶನಗಳನ್ನು ವಾಪಸ್ ತೆಗೆದುಕೊಳ್ಳಲು ಅಧಿಕಾರಿಗಳು ಎಲ್ಲಿ ಹೋಗಿ ಸಹಿ ಹಾಕಿಸಿಕೊಂಡಿದ್ದಾರೆ? ಕಚೇರಿಗೆ ಕರೆಸಿಕೊಂಡಿದ್ದಾರೆಯೇ ಅಥವಾ ಮನೆ ಬಾಗಿಲಿಗೆ ಹೋಗಿದ್ದಾರೆಯೇ? ನಿವೇಶನ ವಾಪಸ್‌‍ ಪಡೆಯುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದು ಯಾರು? ಮುಖ್ಯಮಂತ್ರಿಯವರೇ? ಅಥವಾ ನಗರಾಭಿವೃದ್ಧಿ ಸಚಿವರೇ? ಎಂಬುದೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಸಾಕ್ಷ್ಯ ನಾಶ ಮಾಡುವ ಪ್ರಯತ್ನಗಳಾಗುತ್ತಿವೆ. ವಿಚಾರಣಾ ಹಂತದಲ್ಲೇ ನಿವೇಶನ ವಾಪಸ್‌‍ ನೀಡಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಈ ಕಾರಣಕ್ಕೆ ತನಿಖೆ ಪಾರದರ್ಶಕವಾಗಿದ್ದರೆ ಲೋಕಾಯುಕ್ತ ಪೊಲೀಸರು ತಕ್ಷಣವೇ ಮುಡಾ ಆಯುಕ್ತರನ್ನು ಬಂಧಿಸಬೇಕಿದೆ ಎಂದು ಹೇಳಿದರು.

ಈ ಪ್ರಕರಣವನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸುತ್ತಿದ್ದಂತೆ ತರಾತುರಿಯಲ್ಲಿ ನಿವೇಶನ ಹಿಂಪಡೆಯಲಾಗಿದೆ. ಇದರಲ್ಲಿ ಹಣ ಅಕ್ರಮ ವರ್ಗಾವಣೆಯ ಪ್ರಸ್ತಾಪ ಬರುವುದಿಲ್ಲ ಎಂದು ವಾದಿಸುತ್ತಿದ್ದಾರೆ. ಮುಖ್ಯಮಂತ್ರಿಯವರೇ ನಿವೇಶನದ ಮೌಲ್ಯ 62 ಕೋಟಿ ರೂ. ಎಂದು ಹೇಳಿದ ಮೇಲೆ ಪಿಎಂಎಲ್‌ಎ ಕಾಯ್ದೆ ಆಕರ್ಷಿತವಾಗಲಿದೆ ಎಂದು ಪ್ರತಿಪಾದಿಸಿದರು.

ತಮ ಪತ್ನಿ ಪಾರ್ವತಿಯವರು ನಿವೇಶನ ವಾಪಸ್‌‍ ಪಡೆಯುವಂತೆ ಪತ್ರ ಬರೆದಿರುವುದೇ ನನಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಹಾಗಿದ್ದ ಮೇಲೆ ಮಗ ಯತೀಂದ್ರರ ಕೈಲಿ ಪತ್ರವನ್ನು ಏಕೆ ಕಳುಹಿಸಿದರು? ಈ ವಿಚಾರ ಮನೆಯಲ್ಲಿ ಚರ್ಚೆಯಾಗಿಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ನಾನೇಕೆ ರಾಜೀನಾಮೆ ಕೊಡಬೇಕು? ನನಗೆ ತಲೆ ಕೆಟ್ಟಿದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular