ದಾವಣಗೆರೆ: ನಗರದಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘಿಸಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ 24 ಕಾನೂನು ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ 3600 ರೂ. ದಂಡ ವಿಧಿಸಲಾಗಿದೆ. ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಕಾರದೊಂದಿಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ಬುಧವಾರ (ಆ.9) ಅಧಿಕಾರಿಗಳ ತಂಡ ದಾಳಿ ನಡೆಸಿ ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳ ಮಾರಾಟದ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಟ್ಪಾ ಕಾಯಿದೆ-2003 ಕಾಯ್ದೆ ಪ್ರಕಾರ ಮುಂದಿನ ದಿನಗಳಲ್ಲಿ ತಂಬಾಕು ವ್ಯಾಪಾರಿಗಳಿಗೆ ಪ್ರತ್ಯೇಕ ಪರವಾನಗಿ ನೀಡಲಾಗುವುದು ಎಂದು ಅಧಿಕಾರಿಗಳ ತಂಡ ಸೂಚನೆ ನೀಡಿದೆ. ದಾಳಿಯಲ್ಲಿ ಬಸವನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಶಿವಪ್ಪ, ಎ. ಎಸ್.ಐ, ಸುರೇಶ್, ಜೆ.ಕೆ.ಗಗನ್, ಪವನ್, ಶ್ರೀಧರಮೂರ್ತಿ, ಮಹಾನಗರ ಪಾಲಿಕೆ, ಮಹಮ್ಮದ್, ಶಿಕ್ಷಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಮಾಜ ಸೇವಕ ಕೆ.ಪಿ.ದೇವರಾಜ್ ಇದ್ದರು.