ಕೆ.ಆರ್.ನಗರ: ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಮ್ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದನ್ನು ಖಂಡಿಸಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಜಿ.ಎಲ್.ಧರ್ಮ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ನ್ಯಾಯಾಲಯದ ಮುಂದೆ ಪ್ರತಿಭಟನೆ ಮಾಡಿದ ವಕೀಲರುಗಳು ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ದ ದಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ವಕೀಲರು ನಿರ್ಬೀತಿಯಿಂದ ಕೆಲಸ ಮಾಡಲು ಅಸಾಧ್ಯವಾದ ವಾತಾವರಣ ನಿರ್ಮಾಣವಾಗಿತ್ತಿದ್ದು ಇಂತಹ ದಬ್ಬಾಳಿಕೆ ಮತ್ತು ದೌರ್ಜನ್ಯ ತಡೆಯಲು ಸರ್ಕಾರ ಕೂಡಲೇ ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಹೆಲ್ಮೆಟ್ ಧರಿಸಿಲ್ಲಾ ಎಂಬ ಕಾರಣಕ್ಕೆ ವಕೀಲ ಪ್ರೀತಮ್ ಅವರ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿರುವ ಪೊಲೀಸರ ಕ್ರಮ ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದ ವಕೀಲರು ಅವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದರು. ಹಲ್ಲೆ ನಡೆಸುವುದರ ಜತೆಗೆ ಪ್ರತಿಭಟನೆ ಮಾಡಿರುವ ಪೊಲೀಸರು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡಿದ್ದು ರಾಜ್ಯಪಾಲರು ಕೂಡಲೇ ಮಧ್ಯ ಪ್ರವೇಶಿಸಿ ವಕೀಲರಿಗೆ ರಕ್ಷಣೆ ಕೊಡಿಸಬೇಕೆಂದು ಮನವಿ ಮಾಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಎಲ್.ಧರ್ಮ, ವಕೀಲರಾದ ಜಿ.ಆರ್.ರಾಮೇಗೌಡ, ರುದ್ರಮೂರ್ತಿ ಮತ್ತಿತರರು ಮಾತನಾಡಿ ಘಟನೆಯನ್ನು ತೀವೃವಾಗಿ ಖಂಡಿಸಿ ಸರ್ಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಹಲ್ಲೆ ಮಾಡಿದ ಪೊಲೀಸರನ್ನು ಸೇವೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು. ಆನಂತರ ತಾಲೂಕು ಕಚೇರಿಗೆ ತೆರಳಿದ ವಕೀಲರ ಸಂಘದವರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್.ದಿಲೀಪ್, ಉಪಾಧ್ಯಕ್ಷ ಹೊಸೂರು ಎಚ್.ಎಸ್. ಚೇತನ್‌ಕುಮಾರ್, ಕಾರ್ಯದರ್ಶಿ ಪರಮೇಶ್, ವಕೀಲರಾದ ಜಯರಾಮೇಗೌಡ, ದಯಾನಂದ, ಎಸ್.ಶಿವರಾಜು, ಬಿ.ಎಸ್.ಮಹದೇವಸ್ವಾಮಿ, ಕಾರ್ತಿಕ್, ತಿಮ್ಮಪ್ಪ, ಕೆಂಪನಕೊಪ್ಪಲುದಿನೇಶ್, ಸಂತೋಷ್, ಜವರೇಗೌಡನಕೊಪ್ಪಲುರಘು, ರಂಜಿತ್, ನೇತ್ರಾವತಿ, ಗಾಯತ್ರಿ, ಭಾಸ್ಕರ್, ಅನಂತ್, ಮಂಜುನಾಥ್, ಶರತ್, ಲಕ್ಷ್ಮಣ, ಪುರುಷೋತ್ತಮ, ಮಹೇಶ್, ಲೋಕೇಶ್, ಕೆ.ಪಿ.ರಮೇಶ್, ರಘು ಮತ್ತಿತರರು ಹಾಜರಿದ್ದರು.