ಬೆಂಗಳೂರು: ಹಿಂದೂ ಸಂಸ್ಕoತಿ, ನಂಬಿಕೆಗೆ ಅವಹೇಳನ ಮಾಡುವ ರೀತಿಯಲ್ಲಿ ಗೋ ಹತ್ಯೆ ಹಾಗೂ ಮತಾಂತರ ಕಾನೂನುಗಳನ್ನು ಹಿಂಪಡೆಯಲು ಪ್ರಯತ್ನಿ ಸಿದರೆ ರಾಜ್ಯವ್ಯಾಪಿ ಎಲ್ಲಾ ಸಂತರು ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕದ ಅಧ್ಯಕ್ಷ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾವಿರಾರು ಹಿಂದೂ ಸಂತರ ಹೋರಾಟದ ಪರಿಣಾಮ ಹಿಂದಿನ ಸರ್ಕಾರ ಗೊ ಹತ್ಯೆ ನಿಷೇದ, ಮತಾಂತರ ನಿಷೇಧ ಕಾಯ್ದೆ ಮತ್ತು ಪಠ್ಯ ಪರಿಷ್ಕರಣೆ ಮಾಡಿತ್ತು. ಅದನ್ನು ಕಾಂಗ್ರೆಸ್ ಆಡಳಿತದ ಸರ್ಕಾರ ಹಿಂತೆಗೆದುಕೊಳ್ಳಲು ಹೊರಟಿದೆ. ಇದರ ವಿರುದ್ಧ ನಾವು ಉಗ್ರ ಹೊರಟ ಮಾಡುತ್ತೇವೆ. ಸನಾತನ ಹಿಂದೂ ಧರ್ಮದ ರಕ್ಷಣೆ, ರಾಜ್ಯ ರಕ್ಷಣೆ ಮತ್ತು ಗೋ ರಕ್ಷಣೆ ಮಾಡುವುದೇ ಸಂಘಟನೆ ಉದ್ದೇಶ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೇ ತಿಂಗಳಲ್ಲಿ ಅಲ್ಪ ಸಂಖ್ಯಾತರ ಓಲೈಕೆ ಮಾಡಲು ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದೆ. ಮುಂದುವರಿದು ಈಗ ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಹೊರಟಿದೆ. ಹಿಂದೂ ಧರ್ಮವನ್ನು ಅಪಮಾನ ಮಾಡಿ ದೇಶದ ಬಹುಸಂಖ್ಯಾತ ಜನರ ನಂಬಿಕೆಗೆ ಅವಮಾನವಾಗುತ್ತಿದೆ. ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂದೆ ಸಂತರು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.
ಅಖಿಲ ಭಾರತೀಯ ಸಂತ ಸಮಿತಿ ಕರ್ಣಾಟಕದ ಸಂಘಟನಾ ಕಾರ್ಯದರ್ಶಿ ಪರಮಾತ್ಮ ಜಿ ಮಹಾರಾಜ್ ಸ್ವಾಮಿ ಮಾತನಾಡಿ, ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ನಮ್ಮ ದೇಶ ವೀರ ಯೋಧರ ಇತಿಹಾಸದ ಬದಲು ಬೇರೆ ದೇಶಗಳ ಬಗ್ಗೆ ನಮ್ಮ ಮಕ್ಕಳಿಗೆ ಹೇಳುತ್ತಿದ್ದಾರೆ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ರಾಜ್ಯದ ಎಲ್ಲಾ ಸಂತರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕದ ಉಪಾಧ್ಯಕ್ಷ ಬಸವಮೂರ್ತಿ, ಮಾದಾರ ಚನ್ನಯ್ಯ ಸ್ವಾಮೀಜಿ, ಬಸವನಾಗ್ ಅನಘ ದೇವ ಸರನಾರು, ಕಾರ್ಯದರ್ಶಿ ಈಶ್ವರ್ ಗುರೂಜಿ ಇದ್ದರು.