ತಿರುಪತಿ : ತಿಮ್ಮಪ್ಪನ ಭಕ್ತಾದಿಗಳಿಗೆ ಶೀಘ್ರದರ್ಶನ ಭಾಗ್ಯ ದೊರಕಿಸಿಕೊಡುವ ಉದ್ದೇಶದಿಂದ ವಿಐಪಿ ದರ್ಶನದ ವೇಳೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಏಪ್ರಿಲ್ 1 ರಿಂದ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.
ಈ ವಿವರವವನ್ನು ತಿರುಪತಿ ತಿರುಮಲ ದೇವಸ್ಥಾನಮ್ಸ್ (ಟಿಟಿಡಿ) ಸದಸ್ಯ ಎಸ್ ನರೇಶ್ ಕುಮಾರ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆ 8.30 ರಿಂದ 10.00 ಗಂಟೆಯವರೆಗೆ ವಿಐಪಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದರಿಂದ ಶೀಘ್ರದರ್ಶನದ ಹಾಗೂ ಸರ್ವದರ್ಶನದ ಸರತಿಯಲ್ಲಿ ತೆರಳುವ ಭಕ್ತಾದಿಗಳಿಗೆ ಬಹಳಷ್ಟು ಸಮಯ ವ್ಯಯವಾಗುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಟಿಟಿಡಿ ಮಂಡಳಿ ಸಭೆಯಲ್ಲಿ ವಿಐಪಿ ದರ್ಶನದ ಸಮಯವನ್ನು ಬದಲಾವಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದವರು ಹೇಳಿದ್ದಾರೆ.
ತಿರುಮಲ ವೆಂಕಟೇಶ್ವರನಿಗೆ 1 ಕೋಟಿ ರೂಪಾಯಿ ದಾನ ನೀಡುವ ಭಕ್ತರಿಗೆ ಟಿಟಿಡಿ ವಿಶೇಷ ಸೌಲಭ್ಯಗಳನ್ನು ಒದಗಿಸಲಿದೆ. ತಿರುಮಲದಲ್ಲಿ ವಿಶೇಷ ಉತ್ಸವಗಳು ನಡೆಯುವ ದಿನಗಳನ್ನು ಹೊರತುಪಡಿಸಿ, ಉಳಿದ ದಿನಗಳಲ್ಲಿ ದಾನ ನೀಡಿದ ಭಕ್ತರಿಗೆ ಇತರ ನಾಲ್ವರೊಂದಿಗೆ ಆಜೀವ ದರ್ಶನ ಸೌಲಭ್ಯ ಒದಗಿಸಲು ಟಿಟಿಡಿ ನಿರ್ಧರಿಸಿದೆ ಎನ್ನಲಾಗಿದೆ. ದಾನಿಗಳು ವರ್ಷಕ್ಕೆ 3 ದಿನ ಸುಪ್ರಭಾತ ಸೇವೆ, 3 ದಿನ ಬ್ರೇಕ್ ದರ್ಶನ, 4 ದಿನ ಸುಪಥಂ ಪ್ರವೇಶ ದರ್ಶನದ ಮೂಲಕ ಶ್ರೀವಾರಿಯ ದರ್ಶನ, 10 ದೊಡ್ಡ ಲಡ್ಡುಗಳು, 20 ಸಣ್ಣ ಲಡ್ಡುಗಳು, 1 ದುಪ್ಪಟ, 1 ರವಿಕೆ, 10 ಮಹಾಪ್ರಸಾದ ಪ್ಯಾಕೆಟ್‌ಗಳು ಮತ್ತು ಒಮ್ಮೆ ವೇದ ಆಶೀರ್ವಾದ ಸೇವೆ. ಇದರ ಜೊತೆಗೆ 3,000 ರೂಪಾಯಿ ಮೌಲ್ಯದ ವಸತಿ ಕೊಠಡಿಗಳ ಸೌಲಭ್ಯವನ್ನು 3 ದಿನಗಳ ಕಾಲ ಒದಗಿಸಲಾಗುವುದು ಎಂದು ಪ್ರಕಟಣೆ ತಿಳಸಿದೆ.
ಇದು ಮಾತ್ರವಲ್ಲದೆ, ದಾನಿಗಳು ದಾಖಲೆ ತೋರಿಸಿ ಒಂದು ಬಾರಿ 5 ಗ್ರಾಂ ತೂಕದ ಶ್ರೀವಾರಿಯ ಚಿನ್ನದ ಡಾಲರ್ ಮತ್ತು 50 ಗ್ರಾಂ ತೂಕದ ಬೆಳ್ಳಿ ಡಾಲರ್ ಪಡೆಯಲು ಅವಕಾಶವಿದೆ.
ಏಪ್ರಿಲ್ 1 ರಿಂದ ವಿಐಪಿ ದರ್ಶನಕ್ಕೆ ಬೆಳಿಗ್ಗೆ 5.30 ರಿಂದ 7.30 ಕ್ಕೆ ನಿಗದಿಪಡಿಸಲಾಗಿದೆ. ವಾರಾಂತ್ಯ ಹಾಗೂ ವಿಶೇಷ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಈ ಸಮಯದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಇನ್ನಿತರ ಸೇವೆಗಳು ಹಾಗೂ ದರ್ಶನಕ್ಕೆ ಆಗಮಿಸುವಂತಹ ಭಕ್ತಾದಿಗಳ ದರ್ಶನದ ಸಮಯದಲ್ಲಿ ಕಡಿತಗೊಳ್ಳುವ ನಿರೀಕ್ಷೆಯಿದೆ. ಸಾಮಾನ್ಯ ಭಕ್ತಾದಿಗಳಿಗೆ ಕಡಿಮೆ ಸಮಯದಲ್ಲಿ ದರ್ಶನ ಭಾಗ್ಯ ಲಭಿಸಲಿ ಎನ್ನುವ ಉದ್ದೇಶದಿಂದ ಈ ನಿರ್ಧಾರವನ್ನು ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಎಸ್ ನರೇಶ್ ಕುಮಾರ್ ತಿಳಿಸಿದ್ದಾರೆ.
ತಿರುಪತಿ ವೆಂಕಟೇಶ್ವರನ ಭಕ್ತರ ನೆರವಿಗೆ ಈಗ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಬಳಕೆಗೂ ನಿರ್ಧರಿಸಲಾಗಿದೆ. ಈ ಮೂಲಕ ಇಡೀ ಜಗತ್ತಿನಲ್ಲೇ ಮೊದಲ ಬಾರಿಗೆ ದೇವಾಲಯವೊಂದರಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲಿರುವ ಕೀರ್ತಿಗೆ ಟಿಟಿಡಿ ಪಾತ್ರವಾಗಲಿದೆ.
ಈ ತಂತ್ರಜ್ಞಾನ, ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ದಿನವಿಡೀ ಕಾಯುವ ಭಕ್ತರಿಗೆ ಅನುವಾಗಲಿದೆ. ಕಡಿಮೆ ಸಮಯದಲ್ಲಿ ಭಕ್ತರಿಗೆ ತಿಮ್ಮಪ್ಪನ ದರ್ಶನ ಸಿಗುವಂತಾಗಬೇಕು ಎಂಬ ಸದುದ್ದೇಶದಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸೌಲಭ್ಯ ತರಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ಇದಕ್ಕಾಗಿ ಟಿಟಿಡಿ ಗೂಗಲ್ ಇಂಕ್ ಜೊತೆ ಮಹತ್ವದ ಒಪ್ಪಂದವನ್ನೂ ಮಾಡಿಕೊಂಡಿದೆ ಎಂದು ಹೇಳಲಾಗಿದೆ.