ಪತ್ತನಂತಿಟ್ಟ (ಕೇರಳ): ಶಬರಿಮಲೆಯ ಅಯ್ಯಪ್ಪ ದೇಗುಲದಲ್ಲಿ ಮಲಯಾಳ ನಟ ದಿಲೀಪ್ ಅವರಿಗೆ ವಿಐಪಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ ಆರೋಪದ ಮೇಲೆ ತಿರುವಾಂಕೂರು ದೇವಸ್ವಂ ಮಂಡಳಿ ( ಟಿಡಿಬಿ ) ನಾಲ್ವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ದಿಲೀಪ್ ಅವರಿಗೆ ವಿಐಪಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಭಕ್ತರ ದರ್ಶನಕ್ಕೆ ಅಡ್ಡಿಯಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಟಿಡಿಬಿ ಅಧ್ಯಕ್ಷ ಪಿಎಸ್ ಪ್ರಶಾಂತ್ ಹೇಳಿದ್ದಾರೆ.
ಶಬರಿಮಲೆಯ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತ ಭಕ್ತರನ್ನು ಕಡೆಗಣಿಸಿ ನಟ ದಿಲೀಪ್ ಅವರಿಗೆ ವಿಐಪಿ ದರ್ಶನದ ವ್ಯವಸ್ಥೆ ಕಲ್ಪಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪೊಲೀಸರು ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿಯ ನಡೆಯನ್ನು ಹೈಕೋರ್ಟ್ ಕಟುವಾಗಿ ಟೀಕಿಸಿತ್ತು.
ನ್ಯಾಯಮೂರ್ತಿಗಳಾದ ಅನಿಲ್ ಕೆ. ನರೇಂದ್ರನ್ ಮತ್ತು ಮುರಳಿಕೃಷ್ಣ ಎಸ್. ಅವರನ್ನೊಳಗೊಂಡ ಪೀಠವು, ‘ಡಿ. 5ರಂದು ನಟನಿಗೆ ಯಾವ ಆಧಾರದ ಮೇಲೆ ಇಂತಹ ಸೌಲಭ್ಯ ಒದಗಿಸಲಾಗಿದೆ’ ಎಂದು ಪ್ರಶ್ನಿಸಿತ್ತು. ಇದಕ್ಕೆ ಸಂಬಂಧಿಸಿದ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿತ್ತು.
ದಿಲೀಪ್ ಅವರಿಗೆ ಯಾವ ಮಾನದಂಡದಡಿ ಸೌಲಭ್ಯ ಒದಗಿಸಲಾಗಿದೆ ಎಂಬುದನ್ನು ವಿವರಿಸುವ ವರದಿಯನ್ನು ಸಲ್ಲಿಸುವಂತೆ ನ್ಯಾಯಪೀಠವು ಪೊಲೀಸರಿಗೆ ನಿರ್ದೇಶಿಸಿತ್ತು.
‘ಸುಪ್ರೀಂ ಕೋರ್ಟ್ ಸೇರಿದಂತೆ ಇತರೆ ನ್ಯಾಯಾಲಯಗಳ ಆದೇಶದ ಪ್ರಕಾರ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಮಾತ್ರ ಇಂತಹ ಸೌಲಭ್ಯ ಒದಗಿಸಲು ಅನುಮತಿ ನೀಡಲಾಗಿದೆ. ಡಿ. 5ರಂದು ( ಗುರುವಾರ) ನಡೆದಿರುವುದು ಇದರ ಉಲ್ಲಂಘನೆಯಾಗಿದೆ’ ಎಂದೂ ಹೇಳಿತ್ತು.
ನಟ ದಿಲೀಪ್ ಅವರಿಗೆ ಐವಿಪಿ ದರ್ಶನಕ್ಕೆ ಅವಕಾಶ ನೀಡಿದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿತ್ತು.