ಹುಣಸೂರು,ಜ.05: ಅಂದಿನಿಂದಲೂ ನಮ್ಮೊಂದಿಗೆ ಉತ್ತರ ಕರ್ನಾಟಕದ ಕನ್ನಡಿಗರು ಕನ್ನಡ ಭಾಷೆಗೆ ಒತ್ತು ನೀಡಿದ್ದಾರೆ. ಅದೇ ರೀತಿ ಕನ್ನಡ ಭಾಷೆ ಕಾಯಲು ಕಾನೂನು ಅಗತ್ಯವಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದರು.
ನಗರದ ತಾಲೂಕು ಗ್ರಂಥಾಲಯದ ಆವರಣದಲ್ಲಿ ರಾಷ್ಟ್ರ ಕವಿ ಕುವೆಂಪುರವರ 120 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು, ನುಡಿಗೆ ಅಂದೇ ಒತ್ತು ನೀಡಿ. ಅವರ ಸಮಗ್ರ ಸಾಹಿತ್ಯದ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಿದ್ದರು. ಆದ್ದರಿಂದಲೇ ಮೊದಲ ಜ್ಞಾನ ಪೀಠ ಪ್ರಶಸ್ತಿಯ ಗೌರವ ನಮಗೆ ಸಿಗುವಂತೆ ಮಾಡಿ ಕನ್ನಡ ಭಾಷೆ ವಿಶ್ವಮಟ್ಟದಲ್ಲಿ ಗುರುತ್ತಿಸಲು ಸಾಧ್ಯವಾಗಿತ್ತು ಎಂದರು.
ಕುವೆಂಪು ಸಾಹಿತ್ಯದ ಮೂಲಕ ಸಮಾಜ ಅಂಕುಡೊಂಕುಗಳನ್ನು, ತಿದ್ದಿ, ವಿಚಾರಧಾರೆಯನ್ನು ಸಮರ್ಥವಾಗಿ ಮಂಡಿಸುವ ನಿಟ್ಟಿನಲ್ಲಿ ಸರ್ವಕಾಲಿಕ ವ್ಯಕ್ತಿಯಾಗಿ ನಿಂತು ಜಾತಿಯಿಂದ ದೂರವಿದ್ದು, ವಿಶ್ವ ಮಾನವ ಸಂದೇಶಗಳನ್ನು ಸಾರಿ. ಶೂದ್ರ ಕವಿಯಾಗಿ ರೈತರ ಪರ ಧ್ವನಿಯಾಗಿದ್ದ ಅವರನ್ನು ಪಡೆದ ನಾವೇ ಧನ್ಯರು ಎಂದರು.
ಕುವೆಂಪು ಕನ್ನಡ ಸಾಹಿತ್ಯ ಲೋಕದ ವಿರಾಟ್ ಪ್ರತಿಭೆ: :ಜೆ ಮಹಾದೇವ್ ಕಲ್ಕುಣಿಕೆ
ಕನ್ನಡ ಭಾಷೆ ಹಾಗೂ ಸಾಹಿತ್ಯದ ಅಭಿವ್ಯಕ್ತಿ ಸಾಧ್ಯತೆಗಳನ್ನು ವಿಶ್ವಮಾನ್ಯವಾಗಿಸಿ ಕನ್ನಡ ಸಾಹಿತ್ಯವನ್ನು ತನ್ನ ಕಾವ್ಯ ಪ್ರತಿಭೆಯಿಂದ ಶ್ರೀಮಂತ ಗೊಳಿಸಿದ ಕುವೆಂಪುರವರು ಕನ್ನಡ ಸಾರಸ್ವತ ಲೋಕದ ವಿರಾಟ್ ಪ್ರತಿಭೆ ಎಂದು ಕವಿ , ಸಾಹಿತಿ ಜೆ ಮಹಾದೇವ್ ಕಲ್ಕುಣಿಕೆ ಬಣ್ಣಿಸಿದರು. ಇವರು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಕ್ಕಳ ಸಾಹಿತ್ಯ ದಿಂದ ಮಹಾಕಾವ್ಯದ ವರೆಗೂ ತನ್ನ ಕಾವ್ಯ ಪ್ರತಿಭೆ ಹಾಗೂ ವಸ್ತು ವೈವಿಧ್ಯಗಳ ಮೂಲಕ ಕನ್ನಡದ
ಸಾರಸ್ವತ ಲೋಕವನ್ನು ಬೆಳಗಿ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹೊಸ ಮನ್ವ oತರಕ್ಕೆ ಭಾಷ್ಯ ಬರೆದ ಕುವೆಂಪು ಕನ್ನಡದ ಸಾಕ್ಷಿಪ್ರಜ್ಞೆಯಾಗಿ ಯುಗದಗಲ ಜಗದಗಲ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ ಎಂದು ವಿಶ್ಲೇಷಸಿದರು.
ಕುವೆಂಪುರವರದ್ದು ಬಹುಮುಖಿ ಪ್ರತಿಭೆಯ ಸಂಗಮ
ಕವಿ, ವಿಚಾರವಾದಿ, ದಾರ್ಶನಿಕ, ಮಾನವತಾವಾದಿ ಹಾಗೂ ಕನ್ನಡದ ಅಸ್ಮಿತೆಯ ಪರಿಚಾರಕ ಮುಂತಾದ ನೆಲೆಗಳಲ್ಲಿ ಅವರು ವ್ಯಾಪಿಸಿದ್ದಾರೆ. ವಿಶ್ವಮಾನವ ತತ್ವದ ಮೂಲಕ ಮನುಷತ್ವದ ಪರಿಕಲ್ಪನೆಗೆ ಹೊಸ ವ್ಯಾಖ್ಯಾನ ಬರೆದ ಕುವೆಂಪು ತಮ್ಮ ಕೃತಿಗಳಲ್ಲಿ ಮನುಜ ಮತ, ವಿಶ್ವಪತ, ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿ ಎಂಬ ಪಂಚಮಂತ್ರಗಳ ಮೂಲಕ ಮನುಷ್ಯ ಘನತೆಯ ಮಹತ್ವವನ್ನು ಸಾರಿ ಕಾಲಾತೀತ, ದೇಶಾತೀತ ವ್ಯಕ್ತಿತ್ವವಾಗಿ ನಮ್ಮ ಪ್ರಜ್ಞೆಯನ್ನು ನಿತ್ಯವೂ ಬೆಳಗುತ್ತಿದ್ದಾರೆ ಎಂದು ಬಣ್ಣಿಸಿದರು.
ಮೌಢ್ಯತೆಯ ವಿರುದ್ಧದ ವೈಚಾರಿಕ ಪ್ರಜ್ಞೆ, ಸರ್ವರಲ್ಲೂ ಸಮಾನತೆ, ನೊಂದವರ, ಶೋಷಿತರ ಪ್ರಗತಿ, ಸರ್ವರ ಏಳಿಗೆ, ಸಮಷ್ಟಿ ಪ್ರಜ್ಞೆಯಲ್ಲಿ ನಂಬಿಕೆ,ನೆಲೆ, ಜಲ, ಭಾಷೆ, ಪರಂಪರೆ, ರಾಷ್ಟ್ರೀಯಭಾವೈಕ್ಯ, ಕಟ್ಟುವ ಸಹನೆ ಇವೆಲ್ಲವೂ ಕುವೆಂಪುರವರ ಸಾಹಿತ್ಯಕ ಕೃತಿಗಳ ಗಟ್ಟಿ ದನಿಯಾಗಿ ನವ ಸಮಾಜ, ಸಮಸಮಾಜದ ನಿರ್ಮಾಣಕ್ಕೆ ಪೂರಕವಾದ ಆಶಯಗಳಾಗಿದ್ದವು ಎಂದು ಅಭಿಪ್ರಾಯಿಸಿದರು.
ಕುವೆಂಪುರವರ ವಿಚಾರಧಾರೆ ಸಾರ್ವಕಾಲಿಕವಾಗಿದ್ದು ಮುಂದಿನ ಪೀಳಿಗೆಗೆ ಅರಿವಿನ ಬೆಳಕಾಗಿ ಗೋಚರಿಸುವ ದಿವ್ಯಾಸ್ತ್ರಗಳು ಎಂದು ನುಡಿದರು.
ತಾಲೂಕು ಕಸಾಪ ಅಧ್ಯಕ್ಷ ಹೆಚ್.ಕೆ. ಮಹದೇವ್ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು, ಕುವೆಂಪು ಅವರ ಜೀವನಾವಧಿಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅನನ್ಯವಾಗಿದ್ದು ಆದಿ ಕವಿ ಪಂಪ ಮನುಜ ಕುಲ ನಾನೊಂದೇ ವಲಂ ಎಂದು ಸಾರಿದರೆ ಆಧುನಿಕ ನವಕವಿ ಮನುಜ ಪಥ ವಿಶ್ವ ಪಥ ಎಂದು ವಿಶ್ವದಗಲಕ್ಕೆ ಸಾರುವ ಮೂಲಕ ನಾಡಿನ ಪತಾಕೆಯನ್ನು ಜಗತ್ತಿಗೆ ಅನಾವರಣ ಮಾಡಿದ ಮೇರು ಶಿಖರ ಕುವೆಂಪು ಎಂದರು.
ಮುಖ್ಯ ಅತಿಥಿಗಳಾಗಿ, ಅಖಿಲ ಭಾರತ ವೀರಶೈವ ಮಹಸಭಾದ ಹಂದನಹಳ್ಳಿ ಸೋಮ ಶೇಖರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣ ಕುಮಾರ್, ಜಿಲ್ಲಾ ಕಸಾಪ ಉಪಾಧ್ಯಕ್ಷ ಎಸ್.ಜಯರಾಮ್, ತಾಲೊಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಲೋಕೇಶ್, ತ್ರಿನೇಶ್ , ಖಜಾಂಚಿ ಕೆ.ನಂಜುಂಡಸ್ವಾಮಿ, ವಾಸಕಿ, ಕುಮಾರ್, ಗಂಗಾಧರ್, ಶ್ರೀನಿವಾಸ್, ರಂಗಕಲಾವಿದ ಕುಮಾರ್ ಅರಸೇಗೌಡ, ಇದ್ದರು.

ಇದೇ ಸಂದರ್ಭದಲ್ಲಿ ಗ್ರಂಥ ಪಾಲಕ ಸತೀಶ್, ಕವಿ ನಿಲವಾಗಿಲು ಗಣೇಶ್, ಭರತನಾಟ್ಯ ಪ್ರವೀಣೆ ಕುಮಾರಿ ಸಿಂಚನ ಈ ಮೂವರು ಸಾಧಕರನ್ನು ಸನ್ಮಾನಿಸಲಾಯಿತು.