ವಿಶಾಖಪಟ್ಟಣ (ಆಂಧ್ರ ಪ್ರದೇಶ): ವಿಶಾಖ ಉಕ್ಕು ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ 8 ಮಂದಿ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದುರಂತ ಸಂಭವಿಸಿದ ಕಾರ್ಖಾನೆಗೆ ಭೇಟಿ ನೀಡಿದ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸ್ವತಂತ್ರ ತನಿಖೆಗೆ ಆದೇಶಿಸಿದರಲ್ಲದೆ, ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಅವಘಡದ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಿಂದ ವಿಶಾಖಪಟ್ಟಣಕ್ಕೆ ಧಾವಿಸಿದ ಸಚಿವರು, ವಿಮಾನ ನಿಲ್ದಾಣದಿಂದ ನೇರವಾಗಿ ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ತೆರಳಿದರು. ಉಕ್ಕು ಕರಗಿಸುವ ಘಟಕದಲ್ಲಿನ ಉಷ್ಣ ನಿರೋಧಕ ದ್ರವರೂಪದ ಕೊಳಗದಿಂದ ದ್ರವರೂಪದ ಲೋಹ ಸೋರಿಕೆಯಾದ ಹಿನ್ನೆಲೆಯಲ್ಲಿ ಸ್ಫೋಟ ಸಂಭವಿಸಿ ದುರಂತ ಘಟಿಸಿರಬಹುದು ಎಂದು ಅಂದಾಜಿಸಿದ್ದು, ಈ ಬಗ್ಗೆ ಅಧಿಕಾರಿಗಳು ಸಚಿವರಿಗೆ ವಿವರಣೆ ನೀಡಿದರು.ಘಟನಾ ಸ್ಥಳವನ್ನು ಕೂಲಂಕಷವಾಗಿ ಪರಿಶೀಲಿಸಿದ ಕುಮಾರಸ್ವಾಮಿ ಅವರು, ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿ, ಸಾವಿನ ಕಾರಣಗಳು ಹಾಗೂ ಘಟನೆಯ ಹಿನ್ನೆಲೆ ಕುರಿತು ತಕ್ಷಣವೇ ಸಮಗ್ರ ವರದಿ ಸಲ್ಲಿಸುವಂತೆ ಕಾರ್ಖಾನೆ ಆಡಳಿತ ಮಂಡಳಿಗೆ ಸೂಚಿಸಿದರು.
ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವುದರ ಜೊತೆಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು. ಗಂಭೀರವಾಗಿ ಗಾಯಗೊಂಡವರಿಗೆ ₹10 ಲಕ್ಷ ಪರಿಹಾರ ನೀಡಲಾಗುತ್ತಿದ್ದು, ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಕಾರ್ಖಾನೆಯೇ ಭರಿಸಲಿದೆ ಎಂದರು.
ಮೃತರ ಕುಟುಂಬಗಳಿಗೆ ವಿಶೇಷ ಸೌಲಭ್ಯವಾಗಿ, ಕಾರ್ಮಿಕರ ನಿವೃತ್ತಿ ದಿನಾಂಕದವರೆಗೆ ಸ್ಟೀಲ್ ಪ್ಲಾಂಟ್ ಟೌನ್‌ಶಿಪ್‌ನ ವಸತಿ ಗೃಹಗಳಲ್ಲಿ ವಾಸಿಸಲು ಅವಕಾಶ ನೀಡಲಾಗಿದೆ. ಜೊತೆಗೆ ಮೃತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಕಾರ್ಖಾನೆಯೇ ಭರಿಸಲಿದೆ ಎಂದು ಘೋಷಿಸಿದರು.
ನಂತರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವರು, ಮೃತರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ದುರಂತದ ನಿಖರ ಕಾರಣ ಪತ್ತೆಹಚ್ಚಲು ಸ್ವತಂತ್ರ ತನಿಖೆ ನಡೆಸಲಾಗುತ್ತಿದ್ದು, ಮೃತರ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.



