ಚನ್ನಪಟ್ಟಣ: ತಾಲೂಕಿನ ಬೇವೂರು ಬೆಟ್ಟದ ತಿಮ್ಮಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಷ್ಣು ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಿಂದ ಜರುಗಿತು. ಮೂಲ ದೇವರು ತಿಮ್ಮಪ್ಪನಿಗೆ ಹೂವಿನ ಅಲಂಕಾರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಉತ್ಸವಮೂರ್ತಿಯನ್ನು ದೇವಾಲಯದ ಒಳ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಭಕ್ತರು ದೇವಾಲಯದ ಒಳಗಡೆ ಮಣ್ಣಿನ ಹಣತೆ ಹಚ್ಚಿ ಸಂಭ್ರಮಿಸಿದರು. ಲೋಕ ಕಲ್ಯಾಣಕ್ಕಾಗಿ ಯಾವುದೇ ಅಗ್ನಿ ಅವಘಡಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ದೇವಸ್ಥಾನಗಳಲ್ಲಿ ದೇವರನ್ನು ಪ್ರಾರ್ಥಿಸಿಸಾಂಕೇತಿಕವಾಗಿ ರಾಜ ಗೋಪುರದ ಬಳಿ ತೈಲಪಟಕ್ಕೆ ಮಂಗಳಾರತಿಯಿಂದ ಬೆಂಕಿ ಹಚ್ಚಿ ಧಗಧಗನೆ ಉರಿಸಲಾಯಿತು.
ದೀಪೋತ್ಸವದೇವಸ್ಥಾನದ ಹೊರಗೆ ಗೋಪುರದ ಬಳಿ ಜಗಜ್ಯೋತಿ ಬೆಳಗಿಸಿದರು. ಬಳಿಕ ತೈಲ ಬಟ್ಟೆಯ ಕರಿಯನ್ನು ರಕ್ಷಾ ಪ್ರಸಾದವಾಗಿ ಭಕ್ತರಿಗೆ ನೀಡಲಾಯಿತು. ನಂತರ ಮಹಾಮಂಗಳಾರತಿ ತೀರ್ಥ, ಪ್ರಸಾದ ವಿನಿಯೋಗ ಗಜೋತ್ಸವ ನಡೆಸಲಾಯಿತು. ಮಣ್ಣಿನ ಹಣತೆಯನ್ನು ಅಲಂಕರಿಸಿದ್ದ ದೇವಸ್ಥಾನ ವರ್ಣ ವೈಭವಗಳಿಂದ ಕಂಗೊಳಿಸುತ್ತಿತ್ತು. ಹೊರಗಡೆ ಮಾಡಿದ್ದ ವಿದ್ಯುತ್ ದೀಪಗಳ ಅಲಂಕಾರದಿಂದ ದೇವಾಲಯ ಕಣ್ಮನ ಸೆಳೆಯಿತು.

ಈ ಸಂದರ್ಭದಲ್ಲಿ ತಾಲೂಕು ತಹಸೀಲ್ದಾರ್ ಮಹೇಂದ್ರ ಕುಮಾರ್, ಎಂ ಕೆ ದೊಡ್ಡಿ ಪೊಲೀಸ್ ಇನ್ಸ್ಪೆಕ್ಟರ್ ಸೌಜನ್ಯ, ಅರ್ಚಕ ಸಂತೋಷ್,ಊರಿನ ಮುಖಂಡರಾದ ಯೋಗೀಶ್ ಗೌಡ, ವೆಂಕಟಶಟ್ಟರು , ಮಾಜಿ ಗ್ರಾಮ್ ಪಂಚಾಯಿತಿ ಅಧ್ಯಕ್ಷ ರಮೇಶ್, ಸೇರಿದಂತೆ ಬೇವೂರು ಗ್ರಾಮಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.