ಬೆಂಗಳೂರು: ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಪ್ರಮುಖವಾಗಿದೆ. ಇಂಜಿನಿಯರಿಂಗ್ ಕ್ಷೇತ್ರಕ್ಕೆ ದೇಶಕ್ಕೆ ಅಪಾರ ಕೊಡುಗೆಯನ್ನು ನೀಡಿದವರಲ್ಲಿ ಪ್ರಮುಖರು ಕರ್ನಾಟಕದ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆ ಸ್ಮರಣಾರ್ಥವಾಗಿ ಪ್ರತಿ ವರ್ಷ ಅವರ ಜನ್ಮ ದಿನವನ್ನು ಅಂದರೆ ಸೆ. ೧೫ರಂದು ರಾಷ್ಟ್ರೀಯ ಇಂಜಿನಿಯರ್ಸ್ ದಿನ ಎಂದು ಗುರುತಿಸಲಾಗಿ, ಆಚರಣೆ ಮಾಡಲಾಗುತ್ತಿದೆ.
ಈ ದಿನವನ್ನು ತಾಂತ್ರಿಕ ಶಿಕ್ಷಣದಲ್ಲಿ ಅತ್ಯಂತ ಪ್ರಮುಖ ದಿನವಾಗಿ ಆಚರಿಸಲಾಗುವುದು. ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಸ್ಮರಿಸಿ ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಶ್ರೀಲಂಕಾ ಮತ್ತು ತಾಂಜಾನಿಯದಲ್ಲಿ ಸೆ. ೧೫ ಅನ್ನು ಇಂಜಿನಿಯರ್ ದಿನವಾಗಿ ಆಚರಿಸಲಾಗುವುದು
ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಕರ್ನಾಟಕದ ಮುದ್ದೇನಹಳ್ಳಿ ಗ್ರಾಮದಲ್ಲಿ ೧೮೬೧ರ ಸೆ. ೧೫ರಂದು ಜನಿಸಿದರು. ವಿಶ್ವೇಶ್ವರಯ್ಯ ಅವರು ೧೫ನೇ ವಯಸ್ಸಿಗೆ ತಮ್ಮ ತಂದೆಯನ್ನು ಕಳೆದುಕೊಂಡರು. ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದರು.
ಬಳಿಕ ೧೯೧೨ ರಿಂದ ೧೯೧೮ರವರೆಗೆ ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದರು.
ಮೈಸೂರಿನ ಕೃಷ್ಣ ರಾಜ ಸಾಗರ ಅಣೆಕಟ್ಟು ಮತ್ತು ಹೈದ್ರಾಬಾದ್‌ನ ಪ್ರವಾಹ ಸಂರಕ್ಷಣಾ ವ್ಯವಸ್ಥೆಯ ಹಿಂದಿನ ರೂವಾರಿ ಇವರಾಗಿದ್ದಾರೆ. ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರ್ ಅವರು ಆರ್ಥಿಕ ಬಿಕ್ಕಟ್ಟಿನ ಬರಗಾಲದ ನಡುವೆಯೂ ಅಣೆಕಟ್ಟನ್ನು ನಿರ್ಮಿಸಿದರು. ಈ ಹಿನ್ನೆಲೆ ಗೌರವಾರ್ಥವಾಗಿ ಈ ಅಣೆಕಟ್ಟಿಗೆ ಅವರ ಹೆಸರನ್ನು ಇಡಲಾಗಿದೆ. ೧೯೦೩ರಲ್ಲಿ ಪುಣೆಯ ಖಡಕ್ವಾಸ್ಲಾ ಜಲಾಶಯವನ್ನು ಕೂಡ ವಿನ್ಯಾಸ ಮಾಡಿದರು.
ಪ್ರಧಾನಿ ಶುಭಾಶಯ: ಇಂಜಿನಿಯರ್ಸ್ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ಪ್ರತಿಭಾನ್ವಿತ ಇಂಜಿನಿಯರ್‌ಗಳಿಗೆ ಶುಭಕೋರಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವಿಶ್ವೇಶ್ವರಯ್ಯ ಅವರ ಕೊಡುಗೆ ಸ್ಮರಣೆ ಜೊತೆಗೆ ದೇಶ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರ ಬಿಂಬಿಸುವ ತುಣುಕನ್ನು ಹಂಚಿಕೊಂಡಿದ್ದಾರೆ. ಇಂಜಿನಿಯರ್‌ಗಳ ಅವಿಷ್ಕಾರದ ಮಿದುಳು ಮತ್ತು ಸಮರ್ಪಣೆ ದೇಶದ ಪ್ರಗತಿಯ ಬೆನ್ನೆಲುಬು. ಮೂಲಸೌಕರ್ಯದಿಂದ ಟೆಕ್ ಪ್ರಗತಿಯವರೆಗೆ ಅವರ ಕೊಡುಗೆಗಳು ನಮ್ಮ ಜೀವನದ ಪ್ರತಿಯೊಂದು ಅಂಶವನ್ನು ಸ್ಪರ್ಶಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.