ಬೆಂಗಳೂರು : ನಾನು ದೆಹಲಿಗೆ ಹೋಗುವ ಸಾಧ್ಯತೆಯಿದ್ದು, ಬಹಳಷ್ಟು ಪೆಂಡಿಂಗ್ ಕೆಲಸಗಳಿವೆ. ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು ಹಾಗಾಗಿ, ರಾಜ್ಯದ ಸಂಸದರನ್ನು ಭೇಟಿಯಾಗಬೇಕಿದೆ ಆಗಾಗಿ ದೆಹಲಿಗೆ ಹೋಗುತ್ತಿದ್ದೇನೆ. ನನಗೆ ಮುಖ್ಯಮಂತ್ರಿಯಾಗಲು ಯಾವುದೇ ಆತುರವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
“ನನಗೆ ಮುಖ್ಯಮಂತ್ರಿ ಸ್ಥಾನ ನೀಡುವುದು, ಬಿಡುವುದು ಅದು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ನನಗೆ ರಾಜಕೀಯದಲ್ಲಿ ಯಾವುದೇ ಆತುರವಿಲ್ಲ. ದೆಹಲಿಯಲ್ಲಿನ ನಮ್ಮ ಪ್ರಧಾನ ಕಚೇರಿ, ನಮ್ಮ ಪಾಲಿಗೆ ದೇವಾಲಯ ಇದ್ದಂತೆ. ಹಾಗಾಗಿ, ಆಗಾಗ ಹೋಗಿ ಬರಬೇಕಾಗುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.
ಇನ್ನೂ ನನ್ನ ಸಮುದಾಯದ ದೃಷ್ಟಿಕೋನದ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಪಕ್ಷ ನನಗೆ ಮುಖ್ಯ, ಕಾಂಗ್ರೆಸ್ ಪಾರ್ಟಿ ನನ್ನ ಸಮುದಾಯ. ನಾನು ಒಕ್ಕಲಿಗ ಸಮುದಾಯದಿಂದ ಬಂದಿದ್ದು, ಹಾಗಾಗಿ, ಆ ಸಮುದಾಯದ ಜನ ನನ್ನನ್ನು ಪ್ರೀತಿಸಬಹುದು ಎಂದಿದ್ದಾರೆ. ನನ್ನ ಬದ್ಧತೆ ಹಿಂದುಳಿದ, ಪರಿಶಿಷ್ಟ, ಅಲ್ಪಸಂಖ್ಯಾತ ಸೇರಿದಂತೆ ಸಮಾಜದ ಎಲ್ಲಾ ಸಮುದಾಯಗಳ ಪರವಾಗಿದೆ. ಒಕ್ಕಲಿಗರೂ ಕೂಡ ಹಿಂದುಳಿದ ವರ್ಗದ ಸಮುದಾಯವೇ ಎಂದು ತಿಳಿಸಿದ್ದಾರೆ.
ಅದಲ್ಲದೇ ಮೆಕ್ಕೆಜೋಳ ಬೆಂಬಲ ಬೆಲೆ ವಿಚಾರದ ಬಗ್ಗೆ, ತಮ್ಮ ಸಮುದಾಯದ ನಿಲುವು ಮತ್ತು ಮುಂಬೈ ಭೇಟಿಯ ಬಗ್ಗೆ, ಡಿಕೆ ಶಿವಕುಮಾರ್ ವಿವರಣೆಯನ್ನು ನೀಡಿದ್ದಾರೆ. ಹಾಗೂ ದೇವರ ದಯೆಯಿಂದ ಮೇಕೆದಾಟು ಯೋಜನೆ ಸಂಬಂಧ, ನ್ಯಾಯಾಲಯದಲ್ಲಿ ನಮಗೆ ನ್ಯಾಯ ದೊರಕಿದೆ ಎಂದು ಡಿಕೆ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ನನ್ನ ಮುಂಬೈ ಭೇಟಿಯನ್ನು ಬಿಜೆಪಿಯವರು ಏನಾದರೂ ಅಂದುಕೊಳ್ಳಲಿ, ನಾನು ಅದಕ್ಕೆ ಉತ್ತರಿಸಲು ಹೋಗುವುದಿಲ್ಲ. ನನ್ನ ಆತ್ಮೀಯ ಸ್ನೇಹಿತ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ, ಅವನ ಆರೋಗ್ಯ ವಿಚಾರಿಸಲು ಹೋಗಿದ್ದೆ. ಒಂದು ಗಂಟೆ ಅಲ್ಲಿದ್ದು, ನಂತರ ವಾಪಸ್ ಆಗಿದ್ದೇನೆ ಎಂದು ಡಿಕೆ ಶಿವಕುಮಾರ್ ಉತ್ತರಿಸಿದ್ದಾರೆ.



