ಬೆಂಗಳೂರು: ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಮತದಾರರು ಯಾವುದೇ ಪ್ರಚೋದನೆಗೆ ಒಳಗಾಗದೆ ಸ್ವಂತ ವಿವೇಚನೆಯಿಂದ ಮತ ಚಲಾಯಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕರೆ ನೀಡಿದರು.
ಮಹದೇವಪುರದ ಗುಂಜೂರು ಬಳಿಯ ಕೃಪಾನಿಧಿ ಸಮೂಹ ಸಂಸ್ಥೆಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನ ಮಾಡಬೇಕು, ಆದರೆ, ಗೊಂದಲವಿದೆ ಎನ್ನುವವರು ವೋಟರ್ ಹೆಲ್ಪ್ ಲೈನ್ ಸಾಫ್ಟ್‌ವೇರ್’ನ್ನು ಮೊದಲು ಡೌನ್‌ಲೋಡ್ ಮಾಡಿಕೊಳ್ಳಬೇಕು.
ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಸಾಫ್ಟ್‌ವೇರ್‌ನಲ್ಲಿ ನಮೂದಿಸಿದರೆ, ನಿಮಗೆ ಎಲ್ಲಾ ಮಾಹಿತಿ ಲಭ್ಯವಾಗುತ್ತದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದೂ ನೀವು ಮತದಾನ ಮಾಡದೇ ಇರುವುದು ತಪ್ಪಾಗುತ್ತದೆ. ಹೀಗಾಗಿ ಯಾವುದೇ ಪ್ರಚೋದನೆಗಳಿಗೆ ಒಳಗಾಗದೆ ಮತದಾನ ಮಾಡಿ. ನಿಮ್ಮ ಸ್ವಂತ ವಿವೇಚನೆಯಿಂದ ಮತದಾನ ಮಾಡಿ ಎಂದು ಹೇಳಿದರು.
ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಮತ್ತು ಪೊಲೀಸ್ ಅಧಿಕಾರಿಗಳು ಎಲ್ಲಾ ಪ್ರದೇಶಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುತ್ತಾರೆ ಎಂದು ತಿಳಿಸಿದರು.