Friday, January 16, 2026
Google search engine

Homeರಾಜ್ಯಸುದ್ದಿಜಾಲಚಡಚಣದಲ್ಲಿ ಜಿಪಿಎಸ್ ಹೊಂದಿದ್ದ ರಣಹದ್ದು ಪತ್ತೆ

ಚಡಚಣದಲ್ಲಿ ಜಿಪಿಎಸ್ ಹೊಂದಿದ್ದ ರಣಹದ್ದು ಪತ್ತೆ

ವಿಜಯಪುರ : ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಟ್ರ್ಯಾಕರ್, ಜಿಪಿಎಸ್ ಹಾಗೂ ಕ್ಯಾಮರಾ ಮಾದರಿಯ ಉಪಕರಣಗಳನ್ನು ಹೊಂದಿದ್ದ ರಣಹದ್ದು ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ, ಕೊನೆಗೆ ರಹಸ್ಯ ಬಯಲಾಗಿದೆ. ತೋಟದಲ್ಲಿ ಅಸಹಜ ಸ್ಥಿತಿಯಲ್ಲಿ ಕುಳಿತಿದ್ದ ದೊಡ್ಡ ಪಕ್ಷಿಯನ್ನು ಕಂಡ ಸ್ಥಳೀಯರು ತಕ್ಷಣ 112 ಗೆ ಕರೆ ಮಾಡಿದರು. ಸ್ಥಳಕ್ಕೆ ಧಾವಿಸಿದ 112 ಪೊಲೀಸರು ರಣಹದ್ದನ್ನು ವಶಕ್ಕೆ ಪಡೆದು, ಝಳಕಿ ಪೊಲೀಸ್ ಠಾಣೆಗೆ ಸ್ಥಳಾಂತರಿಸಿದರು. ರಣಹದ್ದಿನ ಕಾಲಿಗೆ ಗುರುತಿನ ಸಂಖ್ಯೆಯ ಟ್ಯಾಗ್ ಅಳವಡಿಸಿರುವುದು ಕಂಡು ಬಂದಿದ್ದು, ಇದರಿಂದ ಪಕ್ಷಿಯ ಮೇಲೆ ವೈಜ್ಞಾನಿಕ ಅಧ್ಯಯನ ನಡೆಯುತ್ತಿರುವುದು ಸ್ಪಷ್ಟವಾಗಿದೆ.

ಪೊಲೀಸ್ ಠಾಣೆಗೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ, ಈ ರಣಹದ್ದು ಮಹಾರಾಷ್ಟ್ರದ ನಾಗಪೂರ ಸಮೀಪದ ಮೇಲಘಾಟ ಪ್ರದೇಶದಿಂದ ಬಂದಿರುವುದು ತಿಳಿದುಬಂದಿದೆ. ಮಹಾರಾಷ್ಟ್ರ ಅರಣ್ಯ ಇಲಾಖೆಯು ರಣಹದ್ದುಗಳ ಜೀವನ ಶೈಲಿ, ಸಂಚರಣೆ ಮಾರ್ಗ ಹಾಗೂ ಇತರೆ ಪಕ್ಷಿಗಳ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಜಿಪಿಎಸ್ ಮತ್ತು ಟ್ರ್ಯಾಕರ್ ಅಳವಡಿಸಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಜಿಪಿಎಸ್ ಮತ್ತು ಟ್ರ್ಯಾಕರ್‌ಗಳ ಭಾರದಿಂದ ರಣಹದ್ದು ಬಸವಳಿದ ಸ್ಥಿತಿಯಲ್ಲಿ ಇದ್ದು, ಅದೇ ಕಾರಣದಿಂದ ಹಾರಲು ಸಾಧ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ರಣಹದ್ದನ್ನು ತಮ್ಮ ಸುಪರ್ಧಿಗೆ ಪಡೆದು ಅಗತ್ಯ ಆರೈಕೆ ನೀಡುತ್ತಿದ್ದಾರೆ.

ಸದ್ಯ ರಣಹದ್ದಿನ ಆರೋಗ್ಯ ಸ್ಥಿತಿಯನ್ನು ನಿಗಾ ವಹಿಸಿ ನೋಡಲಾಗುತ್ತಿದ್ದು, ಸಂಪೂರ್ಣ ಚೇತರಿಸಿಕೊಂಡ ಬಳಿಕ ಹಾರಿ ಬಿಡುವ ಕುರಿತು ಮಹಾರಾಷ್ಟ್ರ ಅರಣ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಅವರ ಸೂಚನೆಗಳಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular