ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ ವಕ್ಫ್ ವಿರುದ್ಧ ರಾಜ್ಯ ಮಟ್ಟದ ಅಭಿಯಾನ ಪ್ರಾರಂಭಗೊಂಡ ಬೆನ್ನಲ್ಲೇ ಬಿಜೆಪಿ ರಾಜ್ಯ ಘಟಕದಿಂದಲೂ ರಾಜ್ಯ ಪ್ರವಾಸ ಘೋಷಣೆ ಮಾಡಲಾಗಿದ್ದು, ಡಿ. 4ರಿಂದ 6ರ ವರೆಗೆ 3 ತಂಡಗಳಲ್ಲಿ ಪ್ರವಾಸ ನಡೆಸಲಾಗುತ್ತದೆ.
ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಈ ಪ್ರವಾಸ ನಡೆಯುತ್ತದೆ. ನಮ್ಮ ಭೂಮಿ ನಮ್ಮ ಹಕ್ಕು ಘೋಷವಾಕ್ಯದ ಅಡಿಯಲ್ಲಿ ಜಿಲ್ಲಾ ಪ್ರವಾಸ ನಡೆಸಿ ವಕ್ಫ್ ಅವಾಂತರ ಕುರಿತು ಜನ ಹಾಗೂ ರೈತರಿಂದ ಅಹವಾಲು ಕೇಳುತ್ತೇವೆ ಎಂದರು.
ಹೈಕಮಾಂಡ್‌ಗೆ ದೂರು
ಯಾವುದೋ ಹಿತಾಸಕ್ತಿ ಇಟ್ಟುಕೊಂಡು ಪಕ್ಷದ ನಿಯಮ, ಶಿಸ್ತು ಉಲ್ಲಂಘಿಸಿ ಹೋರಾಟ ಮಾಡಿದರೆ ಪಕ್ಷಕ್ಕೆ ಸಂಬಂಧವಿಲ್ಲ. ಯತ್ನಾಳ್ ತಂಡದ ವಕ್ಫ್ ಹೋರಾಟ ಪಕ್ಷದ ಹೋರಾಟ ಅಲ್ಲ. ರಾಷ್ಟ್ರೀಯ ನಾಯಕರು ಅವರಿಗೆ ಅನುಮತಿ ಕೊಟ್ಟಿಲ್ಲ. ಈಗ ರಾಷ್ಟ್ರೀಯ ಬಿಜೆಪಿ ಗಮನಕ್ಕೆ ಯತ್ನಾಳ್ ವಿರುದ್ಧ ದೂರು, ವರದಿ ಕೊಡಲಾಗುತ್ತದೆ. ಹಿಡನ್ ಅಜೆಂಡಾಗಳನ್ನು ಪಕ್ಷದ ಹೆಸರು ಹೇಳಿ ತೀರಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.