Saturday, April 19, 2025
Google search engine

Homeರಾಜ್ಯಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಕೊಡುಗೆಗಳೆಂದು ಆಡಿಕೊಳ್ಳುವವರು ಶ್ರಮಿಕರ ಬದುಕು ಗಮನಿಸಿ: ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಕೊಡುಗೆಗಳೆಂದು ಆಡಿಕೊಳ್ಳುವವರು ಶ್ರಮಿಕರ ಬದುಕು ಗಮನಿಸಿ: ಸಿದ್ದರಾಮಯ್ಯ

ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಕೇವಲ ಬಿಟ್ಟಿ ಕೊಡುಗೆಗಳೆಂದು ಆಡಿಕೊಳ್ಳುವವರು ಒಮ್ಮೆ ನಮ್ಮ ಬಡವರ, ಶ್ರಮಿಕರ ಬದುಕನ್ನು ಗಮನಿಸಬೇಕಾಗಿದೆ ಎಂದು ತಮ್ಮ ಬಜೆಟ್‌ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.

ನಮ್ಮ ಐದು ಗ್ಯಾರಂಟಿಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದು, ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ಜನರಲ್ಲಿ ಗೊಂದಲ ಮೂಡಿಸುವುದು, ಇಂತಹ ಕೆಲಸ ಮಾಡುತ್ತಿರುವ ವಿರೋಧ ಪಕ್ಷದವರಿಗೆ ಒಂದೇ ಒಂದು ಮಾತು ಹೇಳಲು ಬಯಸುತ್ತೇನೆ. ಗ್ಯಾರಂಟಿ ಯೋಜನೆಗಳನ್ನು ಕೇವಲ ಬಿಟ್ಟಿ ಕೊಡುಗೆಗಳೆಂದು ಆಡಿಕೊಳ್ಳುವವರು ಒಮ್ಮೆ ನಮ್ಮ ಬಡವರ, ಶ್ರಮಿಕರ ಬದುಕನ್ನು ಗಮನಿಸಬೇಕಾಗಿದೆ. ತಾವು ವಿರೋಧ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಿ. ಆದರೆ ಶ್ರೀಸಾಮಾನ್ಯರ ವಿವೇಚನೆಗೆ ಅಪಮಾನ ಮಾಡಬೇಡಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ಜನರು ಬುದ್ಧಿವಂತರು, ಜನರು ಪ್ರಜ್ಞಾವಂತರು. ಇಂತಹ ತರ್ಕರಹಿತ ಆಲೋಚನೆಗಳನ್ನು ನಂಬುವುದಿಲ್ಲ. ವಾಸ್ತವವೆಂದರೆ, ಜನ ನಿಮ್ಮಿಂದ ಬೇಸತ್ತು ಇಷ್ಟೊಂದು ಭಾರಿ ಬಹುಮತದಿಂದ ನಮ್ಮನ್ನು ಆರಿಸಿ  ವಿಧಾನ ಸೌಧಕ್ಕೆ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಕೆಲ ವರ್ಷಗಳಲ್ಲಿ ನೋಟು ರದ್ದತಿ, ಕೋವಿಡ್‌ ಸಾಂಕ್ರಾಮಿಕತೆ, ರಾಜಕೀಯ ಅಸ್ಥಿರತೆ, ಅನಿಯಂತ್ರಿತ ಬೆಲೆ ಏರಿಕೆ, ಅಭಿವೃದ್ಧಿಯ ಮುನ್ನೋಟದ ಕೊರತೆಯಿಂದಾಗಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಹಾಗಾಗಿ, ಈ ಬಾರಿ ನಾವು ರಾಜ್ಯದ ಜನತೆಯನ್ನು ಈ ಸಂಕಷ್ಟಗಳ ಸುಳಿಯಿಂದ ಹೊರಗೆ ತರಲು, ಅವರ ಮೇಲಿನ ಹೊರೆಗಳನ್ನು ಇಳಿಸಲು ಮೊದಲಿಗೇ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ನಮ್ಮ ಆದ್ಯತೆಗಳನ್ನು ಸ್ಪಷ್ಟಪಡಿಸಿದ್ದೇವೆ ಎಂದಿದ್ದಾರೆ.

ನಮ್ಮ ಸರ್ಕಾರವು ಬಡವರು, ದುರ್ಬಲ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಭೂ ರಹಿತ ಕೃಷಿ ಕಾರ್ಮಿಕರು ಮತ್ತು ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಮೂಲಕ ಎಲ್ಲರ ಕ್ಷೇಮಾಭಿವೃದ್ಧಿಯನ್ನು ಖಾತರಿಪಡಿಸಲು ಬದ್ಧವಾಗಿದೆ. ನಾವು ಒಪ್ಪಂದ ಹಾಗೂ ಅನುಕೂಲಸಿಂಧು ರಾಜಕಾರಣವನ್ನು ಧಿಕ್ಕರಿಸಿ, ಸಂಪೂರ್ಣ ಬಹುಮತವನ್ನು ನೀಡಿರುವ ಶ್ರೀಸಾಮಾನ್ಯರ ತೀರ್ಮಾನವನ್ನು ತಲೆಬಾಗಿಸಿ ಸ್ವೀಕರಿಸುತ್ತೇವೆ. ಹಿಂದಿನ ಸರ್ಕಾರ ಗಣನೀಯವಾಗಿ ನೀಡಿರುವ ಕೊಡುಗೆಯಾದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಗ್ರಹಿಸಲು ನಮ್ಮ ಸರ್ಕಾರ ಶ್ರಮಿಸಲಿದೆ ಎಂದು ಹೇಳಿದ್ದಾರೆ.

ಆಯವ್ಯಯವೆನ್ನುವುದು ಹಣಕಾಸಿನ ನಿರ್ವಹಣೆಯ ಕಸರತ್ತು ಮಾತ್ರವೇ ಅಲ್ಲ. ನಮ್ಮ ಆದ್ಯತೆಗಳನ್ನು, ಗುರಿಗಳನ್ನು ನಿಚ್ಚಳವಾಗಿಸಿಕೊಳ್ಳುವ, ಸಾಕಾರಗೊಳಿಸಿಕೊಳ್ಳುವ ಸಾಧನ.

2023-24 ರ ಆಯವ್ಯಯವನ್ನು ರೂಪಿಸುವಾಗ ರಾಜ್ಯ ಸರ್ಕಾರವು ಬೇಡಿಕೆಗಳನ್ನು ವಾಸ್ತವಗಳೊಂದಿಗೆ ಹಾಗೂ ಸುಸ್ಥಿರ ಅಭಿವೃದ್ಧಿಯೊಂದಿಗೆ ಸಮನ್ವಯಗೊಳಿಸುವ ಮೂಲಕ ವಸ್ತುಸ್ಥಿತಿ ಆಧಾರಿತ, ಫಲಿತಾಂಶ ಕೇಂದ್ರಿತ, ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಪ್ರಜ್ಞಾಪೂರ್ವಕವಾಗಿ ತೀರ್ಮಾನಿಸಿದೆ ಎಂದಿದ್ದಾರೆ.

RELATED ARTICLES
- Advertisment -
Google search engine

Most Popular