Monday, April 21, 2025
Google search engine

Homeರಾಜ್ಯಅರಣ್ಯದ ನೀರುಗುಂಡಿಗೆ ಸೌರಪಂಪ್ ನಿಂದ ನೀರು ಹಾಯಿಸಿ: ಈಶ್ವರ ಖಂಡ್ರೆ

ಅರಣ್ಯದ ನೀರುಗುಂಡಿಗೆ ಸೌರಪಂಪ್ ನಿಂದ ನೀರು ಹಾಯಿಸಿ: ಈಶ್ವರ ಖಂಡ್ರೆ

ಬಂಡೀಪುರ: ಬಂಡೀಪುರ ಅರಣ್ಯದಲ್ಲಿ ಪ್ರಾಣಿಗಳು ಹೆಚ್ಚಾಗಿ ಸಂಚರಿಸುವ ಪ್ರದೇಶಗಳಲ್ಲಿನ ಪ್ರಮುಖ ನೀರುಗುಂಡಿ  (ವಾಟರ್ ಹೋಲ್)ಗಳಿಗೆ ಕೊಳವೆ ಬಾವಿಗೆ ಅಳವಡಿಸಿದ ಸೌರ ಪಂಪ್ ಸೆಟ್ ಗಳ ಮೂಲಕ ನೀರು ಹಾಯಿಸಿ, ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಫಾರಿ ವಾಹನದಲ್ಲಿ ಅರಣ್ಯ ಪ್ರದೇಶ ವೀಕ್ಷಿಸಿದ ಸಚಿವರು, ಈ ಬಾರಿ ಮಳೆಯ ಕೊರತೆಯಿಂದಾಗಿ ಕಾಡಿನಲ್ಲಿರುವ ನೀರುಗುಂಡಿಗಳಲ್ಲಿ ಜಲ ಸಂಗ್ರಹ ಕಡಿಮೆಯಾಗಿದ್ದು, ಅಗತ್ಯ ಇರುವ ಕಡೆ ಕೊಳವೆ ಬಾವಿ ಕೊರೆಸಿ, ಸೌರ ಪಂಪ್ ಸೆಟ್ ಮೂಲಕ ನೀರು ಹರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಸೌರ ಫಲಕಗಳ ಸುತ್ತ ಆನೆಗಳು ದಾಳಿ ಮಾಡದ ರೀತಿಯಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕುವಂತೆ ಸೂಚಿಸಿದ ಸಚಿವರು, ನಿಯಮಿತವಾಗಿ ಜಲಗುಂಡಿಗಳಲ್ಲಿನ ಜಲ ಸಂಗ್ರಹದ ಸ್ಥಿತಿಯ ಬಗ್ಗೆ ನಿಗಾ ಇಡಲು ತಿಳಿಸಿದರು.

ಕಾಳ್ಗಿಚ್ಚು ನಿಗ್ರಹಕ್ಕೆ ಸೂಚನೆ:

ಸಾಮಾನ್ಯವಾಗಿ ಜನವರಿ ಅಂತ್ಯದಿಂದ ಏಪ್ರಿಲ್ ಮಧ್ಯಭಾಗದವರೆಗೆ ಕಾಡ್ಗಿಚ್ಚಿನ ಭೀತಿ ಇರುತ್ತದೆ, ಈ ಹಿನ್ನೆಲೆಯಲ್ಲಿ ಕಾಡಿನಲ್ಲಿ ಕಟ್ಟೆಚ್ಚರ ವಹಿಸುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾಡ್ಗಿಚ್ಚು ವೀಕ್ಷಕರನ್ನು ನಿಯೋಜಿಸುವಂತೆ ಸೂಚಿಸಿದ ಈಶ್ವರ ಖಂಡ್ರೆ, ಕಾಡಿನಲ್ಲಿ ಸಣ್ಣ ಕಿಡಿ ಕಾಣಿಸಿಕೊಂಡರೂ ತಕ್ಷಣವೇ ಅದನ್ನು ನಂದಿಸಲು ಕ್ರಮ ವಹಿಸಲು ತಿಳಿಸಿದರು.

ಆದಿವಾಸಿಗಳು ಸಾಂಪ್ರದಾಯಿಕವಾಗಿ ಕಾಡ್ಗಿಚ್ಚು ನಿಯಂತ್ರಿಸುವಲ್ಲಿ ಪರಿಣಿತರಾಗಿದ್ದು, ಅವರ ಸೇವೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಹಾಗೂ ಯಾರೇ ಉದ್ದೇಶಪೂರ್ವಕವಾಗಿ ಕಾಡಿನಲ್ಲಿ ಬೆಂಕಿ ಹಚ್ಚುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆಯೂ ಸೂಚಿಸಿದರು.

ಫೈರ್ ಲೈನ್ ವೀಕ್ಷಣೆ: ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಅರಣ್ಯದೊಳಗೆ ಇರುವ ರಾಜ್ಯ ಹೆದ್ದಾರಿಗಳಲ್ಲಿ ಸಾಗುವರಿಂದ ಅಕಸ್ಮಾತ್  ಬೆಂಕಿ ದುರಂತ ಸಂಭವಿದರೂ ಅದು ಕಾಡಿಗೆ ವ್ಯಾಪಿಸದಂತೆ ಇಲಾಖೆ  ಮಾಡುತ್ತಿರುವ  ಅಗ್ನಿ ನಿಯಂತ್ರಣ ರೇಖೆ (ಫೈರ್ ಲೈನ್)ಯನ್ನು ವೀಕ್ಷಿಸಿದರು.

ಕಳ್ಳಬೇಟೆ ತಡೆ ಶಿಬಿರಕ್ಕೆ ಭೇಟಿ: ಅರಣ್ಯದಲ್ಲಿನ ಬೆಲೆ ಬಾಳುವ ಮರಗಳ ಕಳವು ತಡೆಯಲು ಮತ್ತು ವನ್ಯಜೀವಿಗಳ ಕಳ್ಳಬೇಟೆ ತಡೆಯಲು ಅರಣ್ಯದೊಳಗೆ ನಿರ್ಮಿಸಲಾಗಿರುವ ಕಳ್ಳಬೇಟೆ ತಡೆ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಅಲ್ಲಿ ದಿನವಿಡೀ ಅರಣ್ಯ ಕಾವಲು ಕಾಯುವ ಸಿಬ್ಬಂದಿಯ ಕಷ್ಟಸುಖ ವಿಚಾರಿಸಿದರು. ಅವರ ಅಡುಗೆ ಕೋಣೆಗೂ ಭೇಟಿ ನೀಡಿ ಪರಿಶೀಲಿಸಿ, ಸಿಬ್ಬಂದಿ ಮಾಡಿಕೊಟ್ಟ ನಿಂಬೆಹುಲ್ಲಿನ ಚಹಾ ಸವಿದರು.

ಲಾಂಟನಾ ಸಮಸ್ಯೆಗೆ ಹೆಚ್ಚಿನ ಹಣ: ಕಾಡಿನಲ್ಲಿ ಹುಲ್ಲೂ ಬೆಳೆಯದಂತೆ ವ್ಯಾಪಿಸುತ್ತಿರುವ ಲಾಂಟನಾ ಕಳೆಯ ಸಮಸ್ಯೆಯನ್ನು ನಿವಾರಿಸಿ ಅರಣ್ಯ ಉಳಿಸಲು ಆದಿವಾಸಿ ಸಮುದಾಯದ ಸ್ಥಳೀಯರ ನೆರವು ಪಡೆದು, ಮಹಾತ್ಮಾಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ನೆರವು ಪಡೆದು ಸಮಸ್ಯೆಗೆ ಪರಿಹಾರ ಒದಗಿಸಲು ಸೂಚಿಸಿದರು. ಬಂಡಿಪುರ, ಕಬಿನಿ ಮತ್ತು ಬಿಆರ್.ಟಿ.ಯಲ್ಲಿ ಲಾಂಟನಾ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಹಣವನ್ನು ಹುಲಿ ಸಂರಕ್ಷಣಾ ಪ್ರತಿಷ್ಠಾನದ ಕ್ರಿಯಾ ಯೋಜನೆಯಲ್ಲಿ ಹೆಚ್ಚಿನ ಹಣ ಒದಗಿಸುವಂತೆಯೂ ಸೂಚಿಸಿದರು.

RELATED ARTICLES
- Advertisment -
Google search engine

Most Popular