ಬೆಂಗಳೂರು: ನಗರದಲ್ಲಿ ಗಲ್ಲಿ ಗಲ್ಲಿಯಲ್ಲೂ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅದೆಷ್ಟರ ಮಟ್ಟಿಗೆ ಅಂದರೆ ಖುದ್ದು ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿದೆ. ಇಷ್ಟೊಂದು ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನಲ್ಲಿ ಜನರು ನಿತ್ಯ ಪರದಾಡುವಂತಾಗಿದೆ. ನೀರಿಲ್ಲದೇ ಸಿಲಿಕಾನ್ ಸಿಟಿ ಹೈರಾಣಾಗಿದ್ದಾರೆ. ನಗರದಲ್ಲಿ ನೀರಿನ ಸಮಸ್ಯೆ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಧರಣಿ ಮಾಡಲಿದೆ.
ಬೆಂಗಳೂರಲ್ಲಿ ನೀರಿನ ಸಮಸ್ಯೆಗೆ ಕಾಂಗ್ರೆಸ್ ಕಾರಣ: ಆರ್. ಅಶೋಕ್
ಈ ವಿಚಾರವಾಗಿ ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಮಾಡಿದ ತಪ್ಪಿನಿಂದ ಬೆಂಗಳೂರಲ್ಲಿ ನೀರಿನ ಸಮಸ್ಯೆ ಅನುಭವಿಸ್ತಿದ್ದೇವೆ. ಸರ್ಕಾರದ ಬಳಿ ಬೋರ್ ವೆಲ್ ಕೊರಿಸುವುದಕ್ಕೂ ಹಣವಿಲ್ಲ. ನಿಮ್ಮ 2000 ರೂಪಾಯಿಯಿಂದ ಏನು ಆಗುತ್ತೆ ಎಂದು ಪ್ರಶ್ನಿಸಿದ್ದಾರೆ.
ವಿದೇಶ ಚಾನಲ್ನಲ್ಲಿ ಬೆಂಗಳೂರಿನ ಮರ್ಯಾದೆ ಹೋಗಿದೆ. ನೀರಿನ ಸಮಸ್ಯೆ ಇದೆ, ಅಲ್ಲಿ ಯಾರು ಹೋಗಬೇಡಿ ಅಂತಿದ್ದಾರೆ. ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಜೋಡಿಯಿಂದ ನೀರಿನ ಸಮಸ್ಯೆ ಆಗಿದೆ. ಇಂತಹ ಕೆಟ್ಟ ಸರ್ಕಾರವನ್ನು ತೊಲಗಿಸಬೇಕಿದೆ. ಕಾಂಗ್ರೆಸ್ನ ಗ್ಯಾರಂಟಿಗಳು ನೀರಿನ ಮೇಲಿನ ಗುಳ್ಳೆಗಳಿದ್ದಂತೆ ಎಂದು ವಾಗ್ದಾಳಿ ಮಾಡಿದ್ದಾರೆ.