ಮೈಸೂರು: ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕನ್ನಡ ಪರ ಸಂಘಟನೆಗಳು, ಕಬ್ಬು ಬೆಳೆಗಾರ ಸಂಘದಿಂದ ಜಲದರ್ಶಿನಿಯಲ್ಲಿರುವ ಸಂಸದ ಪ್ರತಾಪಸಿಂಹ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಬರಗಾಲ ಸೃಷ್ಟಿಯಾಗಿದ್ದರೂ, ಕಾವೇರಿಕೊಳ್ಳದ ಜಲಾಶಯಗಳ ನೀರು ಖಾಲಿಯಾಗುತ್ತಿದ್ದರೂ, ಮಹದಾಯಿ ನದಿ ನೀರಿನ ವಿವಾದ ಕುರಿತು ಯಾವುದೇ ಗಂಭೀರ ಚಿಂತನೆ ನಡೆಯುತ್ತಿಲ್ಲ. ಈ ಬಗ್ಗೆ ರಾಜ್ಯ ಸಂಸದರು ಏನನ್ನೂ ಮಾತನಾಡದೆ ಮೂಕರಂತಿದ್ದಾರೆ. ಕಬಿನಿ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ರಾಜ್ಯದ ರೈತರನ್ನು ಬಲಿಕೊಟ್ಟಿರುವ ರಾಜ್ಯ ಸರ್ಕಾರ ಕೂಡಲೇ ನೀರು ನಿಲ್ಲಿಸಬೇಕು. ಕಾವೇರಿಕೊಳ್ಳದ ಹೆಚ್ಚುವರಿ ನೀರನ್ನು ಸಂಕಷ್ಟ ಕಾಲದಲ್ಲಿ ಬಳಸಿಕೊಳ್ಳಲು ಸಮುದ್ರಕ್ಕೆ ಹರಿಯುವ ಹೆಚ್ಚುವರಿ ಸಂಗ್ರಹಿಸಿಟ್ಟಿಕೊಳ್ಳಲು ಮೇಕೆದಾಟು ಜಲಾಶಯ ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು.
ಮಹದಾಯಿ ನದಿ ನೀರಿನ ವಿವಾದವನ್ನು ಕೂಡಲೇ ಬಗೆಹರಿಸಿ ಯೋಜನೆ ಪೂರ್ಣಗೊಳಿಸಿ ಅಚ್ಚುಕಟ್ಟು ಭಾಗದ ನೀರಿನ ಸಮಸ್ಯೆ ಬಗೆಹರಿಸಬೇಕು. ಸಂಸದರು ಕೇಂದ್ರದ ಮೇಲೆ ಒತ್ತಡ ತಂದು ರಾಜ್ಯಕ್ಕೆ ನ್ಯಾಯ ಒಗದಿಸಬೇಕೆಂದು ಎಂದು ಒತ್ತಾಯಿಸಿದರು.
ಕಬ್ಬು ಬೆಳೆಗಾರರಿಗೆ ಬರಬೇಕಾದ ಹಿಂದಿನ ವರ್ಷದ ಬಾಕಿ ಹೆಚ್ಚುವರಿ ೧೫೦ ರೂ ಸಕ್ಕರೆ ಕಾರ್ಖಾನೆಗಳಿಂದ ಕೂಡಿಸಬೇಕು.
೨೦೨೩-೨೪ನೇ ಸಾಲಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಕಬ್ಬಿನ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಕಬ್ಬಿನ ದರವನ್ನು ಟನ್‌ಗೆ ನಾಲ್ಕು ಸಾವಿರ ನಿಗದಿ ಮಾಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿರುವುದನ್ನು ತಪ್ಪಿಸಿ ಹಗಲು ಹೊತ್ತಿನಲ್ಲಿ ೧೨ ಗಂಟೆಗಳ ವಿದ್ಯುತ್ ಪೂರೈಕೆ ಮಾಡಬೇಕು. ಜತೆಗೆ ಪಂಪ್‌ಸೆಟ್‌ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುತ್ತಿರುವುದನ್ನು ಕೈ ಬಿಡಬೇಕು. ಮಳೆ ಅಭಾವದಿಂದ ರೈತ ಬಿತ್ತಿದ ಬೀಜ ಸತ್ತಿದೆ. ಅಂತರ್ಜಲ ಕುಸಿದಿದೆ. ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಜನ ಜಾನುವಾರುಗಳ ರಕ್ಷಣಾತ್ಮಕ ಕ್ರಮ ಮಾಡದೆ ನಿರ್ಲಕ್ಷ್ಯ ತೋರಿಸುತ್ತಿರುವ ರಾಜ್ಯ ಸರ್ಕಾರ ಕೂಡಲೇ ಬರ ಪಿಡಿತ ಪ್ರದೇಶಗಳ ಬರ ಘೋಷಣೆ ಮಾಡಿ ರಕ್ಷಣಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಅಕ್ಕಿ, ಸಕ್ಕರೆ, ಈರುಳ್ಳಿ, ರಪ್ತು ನಿಷೇಧ ಮಾಡಿರುವುದು ಸರಿಯಲ್ಲ. ತಕ್ಷಣವೇ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಖಾತರಿ ಕಾನೂನು ಜಾರಿಗೆ ತರಬೇಕು. ಹತ್ತಾರು ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿರುವ ಬಗರಹುಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಬಸವರಾಜ್ ಪಾಟೀಲ್, ಗುರುಸಿದ್ದಪ್ಪ, ರಮೇಶ್ ಉಗಾರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜೈ ಕರ್ನಾಟಕ ಜನಪರ ವೇದಿಕೆಯ ಕುಮಾರಸ್ವಾಮಿ, ಉಳುವಪ್ಪ ಬಳಗೇರ, ಪರಶುರಾಮ್, ಕಮಲಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.