ಮಂಡ್ಯ: ತಮಿಳುನಾಡಿಗೆ ಕೆಆರ್ ಎಸ್ ಜಲಾಶಯದಿಂದ ಬಿಡುಗಡೆ ಹಿನ್ನೆಲೆ ಮಂಡ್ಯದಲ್ಲಿ ರೈತರ ಹೋರಾಟ ತೀವ್ರಗೊಂಡಿದ್ದು, ಮದ್ದೂರು ತಾಲೂಕಿನ ಬೆಸರಗರಹಳ್ಳಿ ಗ್ರಾಮವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಸುತ್ತಮುತ್ತಲ ಗ್ರಾಮಗಳಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಬೆಸರಗರಹಳ್ಳಿ ಗ್ರಾಮದಲ್ಲಿ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದ್ದು, ರೈತ ಸಂಘ ಬಂದ್ ಕರೆಗೆ ಅಂಗಡಿ ಮುಂಗಟ್ಟು ತೆರೆಯದೆ ವರ್ತಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಬೆಳ್ಳಂಬೆಳಗ್ಗೆ ಭಿಕ್ಷಾ ಪಾತ್ರೆ ಹಿಡಿದು ರೈತರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ನಾಮ ಚಳವಳಿ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

ಭತ್ತ, ರಾಗಿಗೆ ನೀರಿಲ್ವಲ್ಲೋ ಗೋವಿಂದ. ಕುಡಿಯೋಕು ನೀರಿಲ್ಲ ಗೋವಿಂದ ಗೋವಿಂದ. ಲಾಟಿ, ಗುಂಡು, ಜೈಲಿಗೆ ನಾವು ಹೆದರುವುದಿಲ್ಲ, 420 ಡಿಕೆಶಿಗೆ ಧಿಕ್ಕಾರ ಧಿಕ್ಕಾರ. 420 ರಾಜ್ಯ ಸರ್ಕಾರ ಎಂದು ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡ್ಕೋತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಹಿನ್ನಲೆ ಸಚಿವರ ವಿರುದ್ಧ ಧಿಕ್ಕಾರದ ಪೋಸ್ಟರ್ ಹಿಡಿದು ಕಿಡಿಕಾರಿದ್ದಾರೆ. ಮಾತ್ರವಲ್ಲದೇ ಸಚಿವ ಶಿವಾನಂದ ಪಾಟೀಲ್ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಿಕ್ಷೆ ಮೂಲಕ ಸಚಿವ ಶಿವಾನಂದಗೆ ಪರಿಹಾರ ಹಣ ಸಂಗ್ರಹಿಸಿದ ರೈತರು, ಸಚಿವ ಆತ್ಮಹತ್ಯೆ ಮಾಡಿಕೊಂಡರೇ ರೈತರೆ ಭಿಕ್ಷೆ ಎತ್ತಿ ಪರಿಹಾರ ಕೊಡ್ತೀವಿ ಎಂದು ರೈತರು ಅಣಕಿಸಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ