ಬೆಂಗಳೂರು: ಬೇಸಿಗೆಯ ಆರಂಭವಾಗಿದ್ದು, ನಗರದಲ್ಲಿ ನೀರಿನ ಅಭಾವ ಶುರುವಾಗಿದೆ. ಈ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ಬೆಂಗಳೂರಲ್ಲಿ ಟ್ಯಾಂಕರ್ ನೀರಿನ ದರ ಹೆಚ್ಚಳ ಸೇರಿದಂತೆ ಜನರಿಗೆ ಬರೆಯನ್ನು ಎಳೆಯಲಾಗುತ್ತಿದ್ದು, ಈ ಬಗ್ಗೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ವಾಟರ್ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಮುಂದಾಗಿದೆ.
ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸಂಬಂಧ ಜಲಮಂಡಳಿ ಅಧ್ಯಕ್ಷರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಖಾಸಗಿ ಟ್ಯಾಂಕರ್ ಮಾಲೀಕರು, ದುಬಾರಿ ದರದಲ್ಲಿ ನೀರು ಮಾರಾಟ ಮಾಡುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ, ಟ್ಯಾಂಕರ್‌ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮಾ.1ರೊಳಗೆ ಟ್ಯಾಂಕರ್ ಮಾಲೀಕರ ಸಭೆ ಕರೆದು ಚರ್ಚಿಸಲಾಗುವುದು. ನೀರಿನ ಮೂಲ ಮತ್ತು ದರದ ಬಗ್ಗೆ ಮಾಹಿತಿ ಪಡೆದು, ಯಾರಿಗೂ ಹೊರೆಯಾಗದಂತೆ ದರ ನಿಗದಿಪಡಿಸಲಾಗುವುದು ಎಂದು ಹೇಳಿದರು.
ನಗರದಲ್ಲಿ 3500 ಖಾಸಗಿ ಟ್ಯಾಂಕರ್‌ಗಳಿದ್ದು, ಬಹುತೇಕರು ಉದ್ದಿಮೆ ಪರವಾನಗಿ ಪಡೆದಿಲ್ಲ. ಹಾಗಾಗಿ, ಎಲ್ಲ ಖಾಸಗಿ ನೀರಿನ ಟ್ಯಾಂಕರ್‌ಗಳ ಮಾಲೀಕರು ಮಾ.1 ರಿಂದ 7ರೊಳಗೆ ಸ್ವಯಂ ನೋಂದಣಿ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಪಾಲಿಕೆಯಲ್ಲಿ ನೋಂದಾಯಿಸಿಕೊಳ್ಳದ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆಯಲಾಗುವುದು. ನಿಗದಿಗಿಂತ ಅಧಿಕ ದರದಲ್ಲಿ ನೀರು ಮಾರಾಟ ಮಾಡುವ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆಯಲಾಗುವುದು. ಬಳಿಕ ಅವುಗಳಿಗೆ ಬಾಡಿಗೆ ಮಾತ್ರ ನೀಡಿ, ಜನರಿಗೆ ನೀರು ಪೂರೈಸಲಾಗುವುದು ಎಂದು ವಿವರಿಸಿದರು.
ನಗರದಲ್ಲಿ ನೀರಿನ ಬವಣೆ ನೀಗಿಸಲು ಜಿಲ್ಲಾಧಿಕಾರಿಗಳು 200 ಟ್ಯಾಂಕರ್‌ಗಳನ್ನು ಜಲಮಂಡಳಿಯ ಸುಪರ್ದಿಗೆ ನೀಡಿದ್ದಾರೆ. ಈ ಪೈಕಿ 110 ಹಳ್ಳಿಗಳು, ಪುರಸಭೆ, ನಗರಸಭೆ ವ್ಯಾಪ್ತಿಗೆ 100 ಟ್ಯಾಂಕರ್ ಮತ್ತು ನಗರದ ಕೇಂದ್ರ ಭಾಗದ ಪ್ರದೇಶಗಳಿಗೆ ನೀರು ಪೂರೈಸಲು 100 ಟ್ಯಾಂಕರ್‌ಗಳನ್ನು ಬಳಸಿಕೊಳ್ಳಲಾಗುವುದು.
ನೀರಿನ ಅಭಾವವಿರುವ ಪ್ರದೇಶಗಳಲ್ಲಿ ಸಿಂಟೆಕ್ಸ್ ಟ್ಯಾಂಕ್‌ಗಳನ್ನಿಟ್ಟು ಜಲಮಂಡಳಿಯ 68 ಟ್ಯಾಂಕರ್‌ಗಳ ಮೂಲಕ ಅವುಗಳಿಗೆ ನೀರು ಪೂರೈಸಲಾಗುವುದು. ಆ ಮೂಲಕ ಜನರಿಗೆ ನೀರು ಒದಗಿಸಲಾಗುವುದು. 110 ಹಳ್ಳಿಗಳ ವಾರ್ಡ್‌ಗಳಲ್ಲಿಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಬಿಬಿಎಂಪಿ ಮತ್ತು ಜಲಮಂಡಳಿಯ ಸಹಾಯಕ ಎಂಜಿನಿಯರ್‌ಗಳನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸಲಾಗಿದೆ. ಇವರ ಹೆಸರು, ಮೊಬೈಲ್ ಸಂಖ್ಯೆಯ ವಿವರವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.