ಮಂಡ್ಯ: ಕೇರಳದ ವಯನಾಡು ಸರಣಿ ಭೂ ಕುಸಿತ ಪ್ರಕರಣ ದಲ್ಲಿ ಸಾವನ್ನಪ್ಪಿದ ಮಂಡ್ಯ ಮೂಲದ ಅಜ್ಜಿ ಮೊಮ್ಮಗನ ಶವ ಪತ್ತೆಯಾಗಿದ್ದು ಕತ್ತರಘಟ್ಟ ಗ್ರಾಮಕ್ಕೆ ಕೇರಳದಿಂದ ಪಾರ್ಥಿವ ಶರೀರ ರವಾನೆಯಾಗಿದೆ.

ದುರ್ಘಟನೆಯಲ್ಲಿ ಝಾನ್ಸಿರಾಣಿಯ ಅತ್ತೆ ಲೀಲಾವತಿ(55) ಹಾಗೂ ಮಗ ನಿಹಾಲ್ (2)ಸಾವನ್ನಪ್ಪಿದ್ದರು. ಇಂದು ಮುಂಜಾನೆ ಆ್ಯಂಬ್ಯುಲೆನ್ಸ್ ನಲ್ಲಿ ಪಾರ್ಥಿವ ಶರೀರಗಳು ಬಂದಿದ್ದು, ಮೃತ ದೇಹಗಳನ್ನು ಕಂಡು ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕತ್ತರಘಟ್ಟ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಇಂದು ಕತ್ತರಘಟ್ಟ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಮೃತರ ಮನೆಗೆ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ
ವಯನಾಡು ದುರಂತದಲ್ಲಿ ಕತ್ತರಘಟ್ಟದ ಅಜ್ಜಿ- ಮೊಮ್ಮಗ ಸಾವು ಹಿನ್ನೆಲೆ ಇಂದು ಮೃತರ ಮನೆಗೆ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.
ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ಭೇಟಿ ನೀಡಿ ಸಾಂತ್ವನದ ಜೊತೆಗೆ ಪರಿಹಾರ ವಿತರಣೆ ಮಾಡುವ ಸಾಧ್ಯತೆ ಇದೆ. ಆನಂತರ ಕಾವೇರಿ ಪ್ರವಾಹ ಪೀಡಿತ ಪ್ರದೇಶಗಳತ್ತ ಪ್ರಯಾಣ ಬೆಳೆಸಲಿದ್ದಾರೆ. ಪಾಂಡವಪುರ ತಾಲೂಕಿನ ಎಣ್ಣೆ ಹೊಳೆ ಕೊಪ್ಪಲು, ಶ್ರೀರಂಗಪಟ್ಟಣ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.