Monday, April 7, 2025
Google search engine

Homeರಾಜ್ಯವಯನಾಡು ಭೂಕುಸಿತ: ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸುವಂತೆ ಕುಮಾರಸ್ವಾಮಿ ಆಗ್ರಹ

ವಯನಾಡು ಭೂಕುಸಿತ: ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸುವಂತೆ ಕುಮಾರಸ್ವಾಮಿ ಆಗ್ರಹ

ಬೆಂಗಳೂರು: ನೆರೆಯ ಕೇರಳದಲ್ಲಿ ಸಂಭವಿಸಿರುವ ಭಾರೀ ಮಳೆ ಮತ್ತು ಭೂ ಕುಸಿತದಿಂದ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸುವ ತುರ್ತು ಅಗತ್ಯವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್‌ ತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಕೊಡಗು ಜಿಲ್ಲೆಯು ದುರಂತ ಸ್ಥಳ ವಯನಾಡಿನ ಪಕ್ಕದಲ್ಲೇ ಇದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅತಿ ಅಪಾಯದ ಸ್ಥಿತಿ ಇದೆ. ಅನೇಕ ಕಡೆ ರೆಟ್ ಅಲರ್ಟ್ ಘೋಷಿಸಲಾಗಿದ್ದು, ಭಾರೀ ಮಳೆ ಮುನ್ಸೂಚನೆ ಇದೆ ಎಂದು ಎಚ್ಚರಿಸಿದ್ದಾರೆ.

ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿ ಕೆಲ ಜಿಲ್ಲೆಗಳಲ್ಲಿ ನಿರಂತರವಾಗಿ ಭೂ ಕುಸಿತ ಸಂಭವಿಸುತ್ತಿದೆ. ನೆರೆ ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಅಲ್ಲಿನ ಅಣೆಕಟ್ಟೆಗಳಿಂದ ಭಾರೀ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದ್ದು, ರಾಜ್ಯಕ್ಕೆ ಅಪಾರ ನೆರೆ ನೀರು ಹರಿದು ಬರುತ್ತಿದೆ ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಅಪಾಯದ ಮಟ್ಟ ಮೀರಿ ನೂರಾರು ಗ್ರಾಮಗಳಿಗೆ ನುಗ್ಗಿದೆ, ಅಪಾರ ಬೆಳೆ ನಾಶವಾಗಿದೆ. ಈ ಕಷ್ಟದ ಸಮಯದಲ್ಲಿ ನಾವೆಲ್ಲರೂ ಜನರ ಜತೆಯಲ್ಲಿರಬೇಕು ಎಂದು ಹೇಳಿದ್ದಾರೆ.

ಉಸ್ತುವಾರಿ ಸಚಿವರು ಜಿಲ್ಲಾ ಕೇಂದ್ರಗಳಲ್ಲಿ ಇರಲಿ: 

ಈ ಸಂದರ್ಭದಲ್ಲಿ ನನ್ನ ಕಳಕಳಿಯ ಸಲಹೆ ಇಷ್ಟೇ  ಸರಕಾರ, ಸಚಿವರು, ಶಾಸಕರು, ಅಧಿಕಾರಿಗಳು, ರಾಜ್ಯದ  ಆಡಳಿತ ವ್ಯವಸ್ಥೆ ಜನರ ಹತ್ತಿರದಲ್ಲಿರಬೇಕು. ರೈತರೊಂದಿಗೆ ನೇರ ಸಂಪರ್ಕದಲ್ಲಿದ್ದು ಪರಿಸ್ಥಿತಿ  ಅವಲೋಕಿಸುತ್ತಿರಬೇಕು. ಪ್ರಕೃತಿ ವಿಕೋಪ ಯಾವುದೇ ಕ್ಷಣದಲ್ಲಿ ಬಂದೆರಗುವ ಅಪಾಯ ನಿರ್ಲಕ್ಷಿಸಬಾರದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಕೂಡಲೇ ಎಲ್ಲಾ ಉಸ್ತುವಾರಿ ಸಚಿವರನ್ನು ಜಿಲ್ಲಾ ಕೇಂದ್ರಗಳಲ್ಲಿ ಮೊಕ್ಕಂ ಹೂಡಲು ನಿರ್ದೇಶಿಸಬೇಕು. ಜಿಲ್ಲಾಧಿಕಾರಿಗಳು ಸೇರಿ ಎಲ್ಲಾ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ 24/7 ಸನ್ನದ್ಧವಾಗಿರಬೇಕು. ಅಪಾಯದ ಸ್ಥಳಗಳಿಂದ ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಮುನ್ನೆಚ್ಚರಿಕೆ ಕ್ರಮಕ್ಕೆ ಸಲಹೆಗಳನ್ನು ನೀಡಿದ್ದಾರೆ.

RELATED ARTICLES
- Advertisment -
Google search engine

Most Popular