ಮಂಡ್ಯ: ವಯನಾಡು ದುರಂತ ಪ್ರಕರಣದಲ್ಲಿ ಮಂಡ್ಯದ ಕತ್ತರಘಟ್ಟದ ಮಹಿಳೆ ಕುಟುಂಬ ಸದಸ್ಯರು ಮೃತಪಟ್ಟ ಹಿನ್ನೆಲೆಯಲ್ಲಿ ಕೆ ಆರ್ ಪೇಟೆಯ ಕತ್ತರಘಟ್ಟ ಗ್ರಾಮಕ್ಕೆ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ , ಶಾಸಕ ಎಚ್.ಟಿ.ಮಂಜು ಜೊತೆ ಸೇರಿ ಭೇಟಿ ನೀಡಿ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ನೆರವಿನ ಭರವಸೆ ನೀಡಿದರು.
ವಯನಾಡು ಘಟನೆಯಲ್ಲಿ ಕತ್ತರಘಟ್ಟದ ಝಾನ್ಸಿರಾಣಿಯ ಮಗು ನಿಹಾಲ್ (2.5)ಹಾಗೂ ಅತ್ತೆ ಲೀಲಾವತಿ (55) ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೃತರ ಮನೆಗೆ ನಿಖಿಲ್ ಕುಮಾರಸ್ವಾಮಿ, ಶಾಸಕ ಹೆಚ್.ಟಿ.ಮಂಜು ಹಾಗೂ ಇತರ ಜೆಡಿಎಸ್ ನಾಯಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಇದೇ ವೇಳೆ ಮೃತರ ಕುಟುಂಬಕ್ಕೆ ನಿಖಿಲ್ ಕುಮಾರಸ್ವಾಮಿ 70 ಸಾವಿರ ಧನ ಸಹಾಯ ಸಹಾಯ ಮಾಡಿದ್ದು, ಧೈರ್ಯವಾಗಿರಿ ನಿಮ್ಮೊಂದಿಗೆ ನಾವಿದ್ದೇವೆ, ದುರಂತ ಈಗಾಗಲೇ ನಡೆದು ಹೋಗಿದೆ ಎಂದು ಸಾಂತ್ವನ ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಮುಂದೆ ನೋವು ತೋಡಿಕೊಂಡ ಕುಟುಂಬಸ್ಥರು ನಮ್ಮವರ ಮೃತ ದೇಹವನ್ನಾದರೂ ಕೊಡಿಸಿ ಅವರ ಮುಖವನ್ನು ಆದರೂ ನೋಡುತ್ತೇವೆ ಅವರ ಅಂತ್ಯಕ್ರಿಯೆ ಮಾಡುವ ಅವಕಾಶ ಕಲ್ಪಿಸಿಕೊಡಿ ಎಂದು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಸ್ಪಂದಿಸಿದ ನಿಖಿಲ್ ಕುಮಾರಸ್ವಾಮಿ ಮೃತರ ದೇಹಗಳ ಹುಡುಕಾಟ ನಡೆಯುತ್ತಿದೆ ನಾವು ಸಹ ಈ ಬಗ್ಗೆ ಮುತುವರ್ಜಿ ವಹಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ನಂತರ ಮಾತನಾಡಿ, ಕೇರಳದಲ್ಲಿ ಪ್ರಕೃತಿ ವಿಕೋಪದಿಂದ ಭೂಕುಸಿತವಾಗಿದೆ. 2 ದಿನದಿಂದ ಕಾರ್ಯಾಚರಣೆ ನಡೆಯುತ್ತಲೆ ಇದೆ. 271 ಮಂದಿ ಮೃತಪಟ್ಟಿರುವ ಮಾಹಿತಿ ಇದೆ. ಮಂಡ್ಯ ಜಿಲ್ಲೆಯ ಕತ್ತರಘಟ್ಟದ ಲೀಲಾವತಿ ಹಾಗೂ ನಿಹಾಲ್ ಮೃತಪಟ್ಟಿದ್ದಾರೆ. ಲೀಲಾವತಿ, ನಿಹಾಲ್ ಕಳೆದುಕೊಂಡು ಮಗಳು ಮಂಜುಳ ನೋವಿನಲ್ಲಿದ್ದಾರೆ. ಅವರಿಗೆ ನೋವು ಭರಿಸುವ ಶಕ್ತಿಯನ್ನ ಭಗವಂತ ನೀಡಲಿ. ಇನ್ನೂ ಇದೇ ಕುಟುಂಬದ ಮೂವರು ಕೇರಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 40 ವರ್ಷದಿಂದ ಕೇರಳದಲ್ಲಿ ಈ ಕುಟುಂಬ ನೆಲೆಸಿತ್ತು. ಅವರ ಹೊಸಮನೆಯ ಗೃಹಪ್ರವೇಶ 6 ನೆ ತಾರೀಖು ಆಗಬೇಕಿತ್ತಂತೆ. ಆದ್ರೆ ಭಗವಂತನ ಆಟಕ್ಕೆ ಇಂದು ಬಹಳಷ್ಟು ಜನ ಸಾವನಪ್ಪಿದ್ದಾರೆ. ಕುಮಾರಸ್ವಾಮಿಯವರು ಮಾಹಿತಿ ಪಡೆದಿದ್ದಾರೆ. ಬಹಳಷ್ಟು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಮೃತ ಲೀಲಾವತಿ ಕುಟುಂಬದ ಮೂವರನ್ನ ಕರೆತನ್ನಿ ಎಂದಿದ್ದಾರೆ. ಆ ಪ್ರಯತ್ನವನ್ನು ಮಾಡ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿಯೂ ಹೈ ಅಲರ್ಟ್ ಬಗ್ಗೆ ತಜ್ಞರ ಎಚ್ಚರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಒಂದು ವಾರಗಳ ಕಾಲ ರೆಡ್ ಅಲರ್ಟ್ ಅನ್ನು ಹವಾಮಾನ ಇಲಾಖೆ ನೀಡಿದೆ.ಕೇರಳದಂತೆ ಆಗಬಹುದು ಎಂದು ಮುನ್ನಚ್ಚರಿಕೆ ನೀಡಿದ್ದಾರೆ.
ರಾಜ್ಯದ 10-12 ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದೆ. ಭಗವಂತ ಆಟದ ನೋಡ್ತಿದ್ದು, ಇದು ಯಾರ ಕೈನಲ್ಲೂ ಇಲ್ಲ. ಪ್ರಾಣಹಾನಿ, ಜಾನುವಾರು ಹಾನಿಯಾಗದಂತೆ ಸರ್ಕಾರ ಎಚ್ಚರವಹಿಸಲಿ ಎಂದು ರಾಜ್ಯ ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಬಿಜೆಪಿ ಮುಡಾ ಪಾದಯಾತ್ರೆಗೆ ಜೆಡಿಎಸ್ ಸಪೋರ್ಟ್ ನೀಡದ ವಿಚಾರವಾಗಿ ಮಾತನಾಡಿ, ಕೋರ್ ಕಮಿಟಿ ಸಭೆಯಲ್ಲಿ ಪಾದಯಾತ್ರೆ ಸಂಬಂದ ಚರ್ಚೆಯಾಗಿದೆ. ಎಲ್ಲರೂ ಪಾದಯಾತ್ರೆ ಸದ್ಯಕ್ಕೆ ಬೇಡ ಎಂಬ ಅಭಿಪ್ರಾಯ ತಿಳಿಸಿದ್ದಾರೆ. ಹವಾಮಾನ ಇಲಾಖೆ ಭಾರೀ ಮಳೆಯಾಗುವ ಬಗ್ಗೆ ಮುನ್ನಚ್ಚರಿಕೆ ಕೊಟ್ಟಿದ್ದಾರೆ. ಇದೆನ್ನೆಲ್ಲ ಮುಂದಿಟ್ಟು ಕೊಂಡು ಪಾದಯಾತ್ರೆ ಬೇಡ ಎಂದು ಅಭಿಪ್ರಾಯವ್ಯಕ್ತವಾಗಿದೆ.
ರಾಜ್ಯ ಸರ್ಕಾರ ಹಲವು ಹಗರಣದ ಮೂಲಕ ಹಣ ಲೂಟಿ ಮಾಡ್ತಿದೆ. ಸದನದ ಹೊರಗೆ, ಒಳಗೆ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ ಮಾಡಿದ್ದೇವೆ. ಆದರೇ ಈ ಪಾದಯಾತ್ರೆ ಈಗ ಮಾಡುವುದು ಸೂಕ್ತವಲ್ಲ. ಸಾವು ನೋವಿನಿಂದ ಜನರು ನೊಂದಿದ್ದಾರೆ. ಜನರ ಕಣ್ಣೀರನ್ನ ಹೊರೆಸುವ ಕೆಲಸ ಮಾಡಬೇಕಿದೆ. ಬಳಿಕ ಪಾದಯಾತ್ರೆ ಮಾಡಬಹುದು ಎಂಬ ಅಭಿಪ್ರಾಯವಾಗಿದೆ. ಆ ಅಭಿಪ್ರಾಯವನ್ನ ಮಾಧ್ಯಮಗಳ ಮೂಲಕ ಹೊರಹಾಕಿದ್ದೇವೆ. ಕಳೆದ ವರ್ಷ ರಾಜ್ಯಾದ್ಯಂತ ಬರಗಾಲವಿತ್ತು. ಇದೀಗ ನೆರಯಿಂದ ಬೆಳೆ ನಷ್ಟವಾಗ್ತಿದೆ. ಇನ್ನೂ ಕೆಲ ರೈತರು ಕೃಷಿ ಚಟುವಟಿಕೆ ಪ್ರಾರಂಭ ಮಾಡಿದ್ದಾರೆ. ಇದನ್ನೆಲ್ಲ ಮುಂದಿಟ್ಟುಕೊಂಡು ಪಾದಯಾತ್ರೆಗೆ ಸದ್ಯಕ್ಕೆ ಬೇಡ ಎಂಬ ಅಭಿಪ್ರಾಯವಾಗಿದೆ. ದೇವೇಗೌಡ್ರು, ಕುಮಾರಣ್ಣ ದೆಹಲಿಯಲ್ಲಿದ್ದಾರೆ. ಪಾದಯಾತ್ರೆ ಬಗ್ಗೆ ಎಲ್ಲರೂ ಕೂತು ಮತ್ತೊಮ್ಮೆ ಚರ್ಚೆ ಮಾಡ್ತೇವೆ ಎಂದು ಪಾದಯಾತ್ರೆ ಬಗ್ಗೆ ಸ್ಪಷ್ಟನೆ ನೀಡಿದರು.