ವಿಜಯಪುರ,: ನಾವು ದಲಿತರು, ನಮಗಾಗಿ ಯಾರೂ ಕೈ ಎತ್ತಿಲ್ಲ. ನಾವು ದಲಿತರಾಗಿದ್ದರೆ ಯಾವುದೇ ರೀತಿಯ ಬೆಳವಣಿಗೆ ಸಾಧ್ಯವಿಲ್ಲ’ ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಮೂಲಕ ಬಿವೈ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಹೈಕಮಾಂಡ್ ನಿರ್ಧಾರಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಅಸೆಂಬ್ಲಿಯಲ್ಲೂ ನೋಡಿದ್ದೇವೆ, ಲೋಕಸಭೆಯಲ್ಲೂ ನೋಡಿದ್ದೇವೆ. ಅಸೆಂಬ್ಲಿಯಲ್ಲಿ ದೊಡ್ಡದೊಡ್ಡ ಗೌಡರು, ಸಾಹುಕಾರರುಗಳು ಬಂದರು. ಅವರಿಗೆ, ಅವರ ಪರವಾಗಿ ಕೈ ಎತ್ತುತ್ತಲೇ ಇದ್ದೇವೆ. ಕಳೆದ 75 ವರ್ಷಗಳಿಂದ ನಾವು ಕೈ ಎತ್ತಿಕೊಂಡು ಬಂದಿದ್ದೇವೆ. ನಾವು ದಲಿತರು, ನಮಗಾಗಿ ಈ ಜೀವನದಲ್ಲಿ ಯಾರೂ ಕೈ ಎತ್ತಿಲ್ಲ. ಇದು ಬಹಳ ದುಃಖದ ಸಂಗತಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ನೇಮಕ ನಾವಂತೂ ಮಾಡಿಲ್ಲ. ಪಕ್ಷದ ಹಿರಿಯರು ಯಾವ ಯಾವುದೋ ಕಾರಣಕ್ಕೆ ಮಾಡಿದ್ದಾರೆ. ಬಹಳ ಯೋಚಿಸಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಗನೇ ಆಗಬೇಕೆಂದು ನೇಮಿಸಿದ್ದಾರೆ. ಇದರಂತೆ ಬಿವೈ ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ವಿಜಯೇಂದ್ರ ಆಗಿರುವುದರಿಂದ ನಮಗೇನೂ ಹೊಟ್ಟೆ ಉರಿ ಇಲ್ಲ ಎಂದು ಅವರು ಹೇಳಿದ್ದಾರೆ.
ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಬೇಕೆಂದು ಅಂದುಕೊಂಡವನೂ ಅಲ್ಲ. ಅದರ ಕನಸೂ ನಾವು ಕಂಡಿಲ್ಲ. ನಮಗೆ ಗೊತ್ತಿದೆ, ನಾವು ದಲಿತರಾಗಿದ್ದರೆ ಬೆಳವಣಿಗೆ ಸಾಧ್ಯವಿಲ್ಲ ಎಂದು ಜಿಗಜಿಣಗಿ ಬೇಸರ ವ್ಯಕ್ತಪಡಿಸಿದ್ದಾರೆ.