Wednesday, December 24, 2025
Google search engine

Homeಕಲೆ-ಸಾಹಿತ್ಯಪ್ರತಿಭೆ ಯಾರಲ್ಲಿ ಅಡಗಿದೆ ಎಂಬುವುದನ್ನು ನಾವು ಊಹಿಸಲು ಸಾಧ್ಯವಿಲ್ಲ, ಇದಕ್ಕೆ ಡಾ.ರಾಜಕುಮಾರ್ ರವರೇ...

ಪ್ರತಿಭೆ ಯಾರಲ್ಲಿ ಅಡಗಿದೆ ಎಂಬುವುದನ್ನು ನಾವು ಊಹಿಸಲು ಸಾಧ್ಯವಿಲ್ಲ, ಇದಕ್ಕೆ ಡಾ.ರಾಜಕುಮಾರ್ ರವರೇ ಸಾಕ್ಷಿ: ಶಾಸಕ ಡಿ.ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಯಂತಹ ಕಾರ್ಯಕ್ರಮಗಳು ಮುಖ್ಯವಾಗಿದ್ದು ಶಿಕ್ಷಕರು ಮತ್ತು ಪೋಷಕರು ತಮ್ಮ ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಪ್ರೇರೇಪಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿರುವ ಆದರ್ಶ ಶಾಲೆಯಲ್ಲಿ ಮಂಗಳವಾರ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಕ್ಷೇತ್ರ ಮತ್ತು ಆರೋಗ್ಯ ಕ್ಷೆತ್ರಗಳು ಬಹಳ ಪ್ರಮುಖವಾಗಿದ್ದು ಇದಕ್ಕೆ ಹೆಚ್ಚಿನ ಆದ್ಯತೆಯನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದು ಹೇಳಿದರು.

ಪ್ರತಿಭೆ ಯಾರಲ್ಲಿ ಅಡಗಿದೆ ಎಂಬುವುದನ್ನು ನಾವು ಊಹಿಸಲು ಸಾಧ್ಯವಿಲ್ಲ. ಇದಕ್ಕೆ ಉದಾಹರಣೆ ಕಲಾವಿದರು, ಹೆಮ್ಮೆಯ ನಟರು ಆದ ಡಾ.ರಾಜಕುಮಾರ್ ರವರೇ ಸಾಕ್ಷಿ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಮೊದಲ ಹಂತವಾಗಿ ಶಾಲೆಗಳಿಂದಲೇ ಆಗಬೇಕು ಅಲ್ಲದೆ ಮಕ್ಕಳ ಪ್ರತಿಭೆ ಆ ಶಿಕ್ಷಕರಿಗೆ ತಿಳಿಯಲಿದೆ. ಅವರೇ ಗುರುತಿಸಿ ಪ್ರೇರೇಪಿಸಿ ಜತೆಗೆ ವೇದಿಕೆ ಕಲ್ಪಿಸಿಕೊಟ್ಟರೆ ಸಾಧನೆಯ ಆದಿ ಸುಗಮ ಆಗಲಿದೆ. ಆದ್ದರಿಂದ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ನಡೆಯಿರಿ ಎಂದು ಕಿವಿ ಮಾತು ಹೇಳಿದರು.

ಮುಂಬರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಮ್ಮ ಎರಡು ತಾಲೂಕಿನಲ್ಲಿ ಹೆಚ್ಚು ಫಲಿತಾಂಶ ಬರುವಂತೆ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಇದಕ್ಕೆ ಅಗತ್ಯ ಅನುಕೂಲಗಳನ್ನು ನಾನು ಮಾಡಿಕೊಡುತ್ತೇನೆ. ಇಂದಿನ ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳಾಗಲಿದ್ದು ಈ ದೇಶಕ್ಕೆ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಜವಾಬ್ದಾರಿ ನಿಮ್ಮ ನಮ್ಮಗಳ ಮೇಲಿದ್ದು ಪ್ರತಿಯೊಬ್ಬರು ಆತ್ಮ ತೃಪ್ತಿಯಿಂದ ಕೆಲಸ ನಿರ್ವಹಿಸಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಯಶಸ್ವಿಯಾಗಿ ಎಂದು ಹೇಳಿದರು.

ಶಿಕ್ಷಕರ ಭವನಕ್ಕೆ ಅನುದಾನ ನೀಡಿ ಗುಣಮಟ್ಟದ ಕಾಮಗಾರಿ ಮಾಡಿ ಹೊಸ ಕಟ್ಟಡ ಮಾಡಲು ನಾನು ಅನುದಾನ ಕೊಡುವ ಜೊತೆಗೆ ವೈಯಕ್ತಿಕವಾಗಿ 5 ಲಕ್ಷಗಳ ಅನುದಾನವನ್ನು ಕೂಡ ನೀಡಲಿದ್ದೇನೆ. ಆದರ್ಶ ಶಿಕ್ಷಣ ಸಂಸ್ಥೆ ಉತ್ತಮ ಶಿಕ್ಷಣ ನೀಡುತ್ತಿದ್ದು ಉತ್ತಮ ಫಲಿತಾಂಶ ಕೊಡುತ್ತಿದೆ. ಆದ್ದರಿಂದ ವಯಕ್ತಿಕವಾಗಿ ಸಂಸ್ಥೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದಕ್ಕೆ ನಾನು ಧನ್ಯವಾದಗಳನ್ಮು ತಿಳಿಸುವ ಜೊತೆಗೆ ಶಾಲೆಗೆ ಈಗಾಗಲೇ ಅವಶ್ಯಕತೆ ಇರುವ ವಾಕಿಂಗ್ ಪಾತ್ ಎಲ್ಲಾ ನಿರ್ಮಿಸಿ ಕೊಟ್ಟಿದ್ದು ನೀವು ಮನವಿ ಮಾಡಿದಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಶೀಘ್ರವಾಗಿ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಆದರ್ಶ ಶಾಲೆ ಎಸ್ ಡಿಎಂಸಿ ಅಧ್ಯಕ್ಷ ಕೆ.ಪಿ.ಜಗದೀಶ್ ಮಾತನಾಡಿ ನಮ್ಮ ಶಾಲೆ ತಾಲೂಕಿನಲ್ಲಿಯೇ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಫಲಿತಾಂಶ ನೀಡುತ್ತಿದ್ದು ಇದರಿಂದ ಶಾಲೆಗೆ ಹೆಚ್ಚಿನ ಕೀರ್ತಿ ಬರುತ್ತಿದೆ ಅಲ್ಲದೆ ವಿದ್ಯಾರ್ಥಿಗಳು ಸೇರ್ಪಡೆಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದು ಇದಕ್ಕೆ ಶಾಸಕರು ನಮ್ಮ ಶಾಲೆಗೆ ಬೇಕಾದಂತಹ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುವಲ್ಲಿ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮವನ್ನು ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎನ್.ಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಕೆ.ಆರ್.ನಗರ ತಾಲೂಕು ಮತ್ತು ಸಾಲಿಗ್ರಾಮ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದರು. ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಶಾಸಕರು ಪ್ರಶಸ್ತಿ ಪತ್ರ ವಿತರಿಸಿ ಮೇಲ್ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ನಮ್ಮ ಕ್ಷೇತ್ರಕ್ಕೆ ಕೀರ್ತಿ ತರುವಂತೆ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಜಿ.ಸುರೇಂದ್ರ ಮೂರ್ತಿ ತಾಪಂ ಇಒ ಗಳಾದ ವಿ.ಪಿ.ಕುಲದೀಪ್, ರವಿಕುಮಾರ್, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬ್ಯಾಡರಹಳ್ಳಿ ಭಾಸ್ಕರ್, ಇಸಿಓ ದಾಸಪ್ಪ, ಎಸ್ ಡಿಎಂಸಿ ಸದಸ್ಯರಾದ ಉದಯಶಂಕರ್, ವಕೀಲ ಕೆ.ಸಿ.ಹರೀಶ್, ಆದರ್ಶ ಶಾಲೆ ಮುಖ್ಯ ಶಿಕ್ಷಕಿ ರುಕ್ಮಣಿ, ಬಿಆರ್ ಸಿ ವೆಂಕಟೇಶ್, ಅಕ್ಷರ ದಾಸೋಹ ಉಪನಿರ್ದೇಶಕ ಸ್ವಾಮಿಗೌಡ, ದೈಹಿಕ ಶಿಕ್ಷಣ ಸಂಯೋಜಕ ಕುಮಾರಸ್ವಾಮಿ, ತಾಲೂಕು ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಚೀರ್ನಹಳ್ಳಿ ಉಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular