ಮೈಸೂರು: ರಾಜ್ಯ ಸರಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳಿಗೆ ಕೇಂದ್ರ ಸರಕಾರದಿಂದ ಒಂದು ನಯಾ ಪೈಸೆ ಬೇಕಿಲ್ಲ, ಆದರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು ಕರ್ನಾಟಕಕ್ಕೆ ಬಂದು ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರಕಾರ ದುಡ್ಡು ಕೇಳುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದೇ ವೇದಿಕೆಗೆ ಬನ್ನಿ ಸಾರ್ವಜನಿಕವಾಗಿಯೇ ಚರ್ಚೆ ಮಾಡೋಣ ಯಾವು ಸತ್ಯ ಯಾವುದು ಸುಳ್ಳು ಎಂದು ರಾಜ್ಯದ ಜನರಿಗೆ ತಿಳಿಯಲಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಬಹಿರಂಗ ಸವಾಲು ಹಾಕಿದರು.
ನಗರದ ಬೂತಾಳೆ ಮೈದಾನದಲ್ಲಿ ಇಂದು ಬುಧವಾರ ನಗರ ಕಾಂಗ್ರೆಸ್ ವತಿಯಿಂದ ಬಿಜೆಪಿ-ಜೆಡಿಎಸ್ ಮುಖಂಡರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಅವರು ಮಾತನಾಡಿದರು. ಈ ವರ್ಷದ ಗ್ಯಾರಂಟಿ ಯೋಜನೆಗಳಿಗೆ ೩೬ ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಕೇಂದ್ರ ಸರಕಾರದಿಂದ ಒಂದು ಪೈಸೆ ಕೇಳಿಲ್ಲ. ಮುಂದಿನ ವರ್ಷದ ಗ್ಯಾರಂಟಿ ಯೋಜನೆಗೆ ೫೨ ಸಾವಿರ ಕೋಟಿ ರೂ. ಬಜೆಟ್ ನಲ್ಲಿ ತೆಗೆದಿಟ್ಟಿದ್ದೇವೆ. ಇದಕ್ಕೂ ನಿಮ್ಮ ಒಂದು ರೂಪಾಯಿ ಬೇಡ. ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಸುಳ್ಳು ಹೇಳುವುದಕ್ಕೆ ರಾಜ್ಯದ ಬಿಜೆಪಿ ಮುಖಂಡರುಗಳು ತಮಟೆ ಹೊಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.