ನವದೆಹಲಿ: ಬರದ ಕಾರಣ ೧೭,೯೦೧ ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ದೆಹಲಿಯಲ್ಲಿ ಮಾತನಾಡಿದ ಅವರು, ಜೂನ್‌ನಲ್ಲಿ ಶೇ ೫೬ರಷ್ಟು ಮಳೆ ಕೊರತೆ, ಜುಲೈನಲ್ಲಿ ಶೇ ೨೯ರಷ್ಟು ಮಳೆ ಕೊರತೆ, ಆಗಸ್ಟ್‌ನಲ್ಲಿ ಶೇ ೭೩ ರಷ್ಟು ಮಳೆ ಕೊರತೆ, ಸೆಪ್ಟೆಂಬರ್‌ನಲ್ಲಿ ಶೇ ೨೬ರಷ್ಟು ಮಳೆ ಕೊರತೆ ಹಾಗೂ ಅಕ್ಟೋಬರ್ ತಿಂಗಳಲ್ಲಿ ಶೇ ೬೩ ರಷ್ಟು ಮಳೆ ಕೊರತೆ ಆಗಿದೆ ಎಂದರು. ಒಟ್ಟು ೨೧೬ ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ.
ಮೊದಲ ಸುತ್ತಿನಲ್ಲಿ ೧೯೫ ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿದ್ದೆವು. ೨ನೇ ಸುತ್ತಿನಲ್ಲಿ ೨೧ ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬರಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಪಶು ಸಂಗೋಪನೆ ಚಟುವಟಿಕೆಗಳಿಗೆ ೩೫೫ ಕೋಟಿ ರೂ. ನೀಡಲು ಮನವಿ ಮಾಡಿದ್ದೇವೆ.
ಡಿಸೆಂಬರ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಒಟ್ಟು ೧೭೯೦೧ ಕೋಟಿ ರೂ. ಹಣ ಬಿಡುಗಡೆ ಮಾಡಲು ಮನವಿ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು. ಕೇಂದ್ರದ ಅಧಿಕಾರಿಗಳು ರಾಜ್ಯಕ್ಕೆ ಬಂದು ಅಧ್ಯಯನ ಕೂಡ ಮಾಡುತ್ತಿದ್ದಾರೆ. ಇನ್ನೆರಡು ದಿನದಲ್ಲಿ ಕೇಂದ್ರದ ಅಧಿಕಾರಿಗಳ ತಂಡ ವರದಿ ಸಲ್ಲಿಸಬಹುದು. ಆದಷ್ಟು ಬೇಗ ಹಣ ಬಿಡುಗಡೆ ಆಗಬೇಕು ಅಂತಾ ಮನವಿ ಮಾಡಿದ್ದೇವೆ. ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಕೃಷ್ಣ ಭೈರೇಗೌಡ ತಿಳಿಸಿದರು.