ಮದ್ದೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿದೆ. ಗ್ಯಾರಂಟಿ ಯೋಜನೆಗಳನ್ನು ರೈತರು ಹಾಗೂ ಬಡವರ ಮಕ್ಕಳಿಗೆ ನೀಡಿದ್ದೇವೆ, ಜಾತಿ, ಧರ್ಮ, ಪಕ್ಷ ನೋಡಿ ಗ್ಯಾರಂಟಿ ಅನುಷ್ಟಾನಗೊಳಿಸಿಲ್ಲ, ನಮ್ಮ ರಾಜಕೀಯ ಎದುರಾಳಿ ಕುಮಾರಸ್ವಾಮಿ ಅವರಿಗೆ ಮತ ಹಾಕಿದವರಿಗೂ ಗ್ಯಾರಂಟಿ ಕೊಟ್ಟಿದ್ದೇವೆ, ಇದಕ್ಕೆ ವಿರೋಧ ಸೂಚಿಸಿದರೆ, ಬಿಜೆಪಿಯವರ ಜೊತೆ ಸೇರಿ ಗ್ಯಾರಂಟಿ ಯೋಜನೆ ರದ್ದುಗೊಳಿಸುವ ತಾಕತ್ತು ಇದೆಯೇ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ ಪ್ರಶ್ನಿಸಿದರು.
ಮದ್ದೂರು ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹರಿಯಾಣ ಚುನಾವಣೆಯಲ್ಲಿ ದುಡ್ಡು ಹಂಚಲು ಮುಂದಾಗಿದ್ದಾರೆ, ನಮ್ಮ ರಾಜಕೀಯ ಎದುರಾಳಿಗಳು ಮಾಡಿದ್ರೆ ಆಚಾರ, ನಾವು ಮಾಡಿದ್ರೆ ಅನಾಚಾರವೇ ಎಂದು ಪ್ರಶ್ನಿಸಿದ ಅವರು ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್ ಪಕ್ಷ ಎಂಬುದನ್ನು ಜಿಲ್ಲೆ ಹಾಗೂ ರಾಜ್ಯದ ಜನತೆ ಅರಿತಿದ್ದಾರೆ ಎಂದರು.
ಮನೆಯೊಡತಿಯ ಕೈಗೆ ಹಣ ಕೊಟ್ಟರೆ ಗಂಡಸರು ಪಡೆಯಬಹುದು. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ಅನ್ನು ೫೦ ರೂ. ಗೆ ನೀಡಿದರೆ, ರೈತರು ಹಾಗೂ ಶ್ರೀಸಾಮಾನ್ಯರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಬೇಕೆಂದು ಆಗ್ರಹಿಸಿದರು. ರಾಜ್ಯದಲ್ಲಿ ಒಂದು ಮಾತು, ದೆಹಲಿಯಲ್ಲಿ ಒಂದು ಮಾತನಾಡುವುದು ಜನಪ್ರತಿನಿಧಿಗೆ ತಕ್ಕದ್ದಲ್ಲ, ಅಂತಹವರಿಗೆ ಜನತೆ ಉತ್ತರಿಸುವ ಕಾಲ ಬರುತ್ತದೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ದ ಅಸಹನೆ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಸೋಲಿನಿಂದ ಧೃತಿಗೆಟ್ಟು ನಮ್ಮ ಕಾರ್ಯಕ್ರಮವನ್ನು ನಿಲ್ಲಿಸುವುದಿಲ್ಲ, ನಾನು ಸೋತು ಮನೆಯಲ್ಲಿ ಕುಳಿತಿಲ್ಲ, ಜನರ ಕಷ್ಟದಲ್ಲಿ ಭಾಗಿಯಾಗಿದ್ದೇನೆ, ಕಾಂಗ್ರೆಸ್ ಸರ್ಕಾರ ಜನರ ಪರವಿದೆ. ಅಭಿವೃದ್ದಿ ಕುಂಠಿತವಾಗಿಲ್ಲ, ಹಳೇ ಕೆಲಸ ಪೂರ್ಣಗೊಂಡ ನಂತರ ಮತ್ತಷ್ಟು ಅಭಿವೃದ್ದಿಯ ವೇಗ ಹೆಚ್ಚಲಿದೆ ಎಂದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ತೈಲೂರು ಚಲುವರಾಜು ಹಾಗೂ ಅಣ್ಣೂರು ರಾಜೀವ್ ನಿರ್ಗಮಿತ ಅಧ್ಯಕ್ಷ ಕದಲೂರು ರಾಮಕೃಷ್ಣ ಅವರಿಂದ ಅಧಿಕಾರ ಸ್ವೀಕರಿಸಿದರು.