ಮೈಸೂರು: ಮುಡಾದಲ್ಲಿ ಅಕ್ರಮ ಮಾಡಿರೋರ ವಿಚಾರ ಚರ್ಚೆ ಆಗುತ್ತಿಲ್ಲ. ಅಕ್ರಮ ಮಾಡದೇ ಇರೋರರ ಬಗ್ಗೆ ಪ್ರತಿನಿತ್ಯ ಚರ್ಚೆ ಆಗುತ್ತಿದೆ. ಮೈಸೂರು ಮಹಾರಾಜರು ಕಟ್ಟಿದ ಮುಡಾದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ತಮ್ಮ ವಿರುದ್ಧ ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, “ಜಮೀನಿನ ಭೂ ಮಾಲೀಕರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಜಿ.ಟಿ. ದೇವೇಗೌಡ, ಹರೀಶ್ ಗೌಡ ಪಾತ್ರ ಇಲ್ಲ ಎಂದಿದ್ದಾರೆ. ನಾವು ಯಾವುದೇ ಅಕ್ರಮ ಮಾಡಿಲ್ಲ. ಮುಡಾದಲ್ಲಿ ಸಾರ್ವಜನಿಕರ ಕೆಲಸ ಆಗಬೇಕು. ಮುಡಾ ಅಭಿವೃದ್ಧಿ ಆಗಬೇಕು. ಈಗಾಗಲೇ ಲೋಕಾಯುಕ್ತ, ಇಡಿ ಸರ್ಕಾರ ನೇಮಕ ಮಾಡಿರುವ ತನಿಖಾ ಸಂಸ್ಥೆಯಿಂದ ತನಿಖೆ ನಡೆಯುತ್ತಿದೆ. ಸತ್ಯಾಸತ್ಯತೆ ಆಚೆ ಬರಬೇಕು ಎಂದು ಆಗ್ರಹಿಸುತ್ತೇನೆ” ಎಂದು ತಿಳಿಸಿದರು.
ವೈರಸ್‌ನಂತೆ ಮೈಕ್ರೋ ಫೈನಾನ್ಸ್ : “ಕೊರೋನಾ ವೈರಸ್‌ನಂತೆ ಮೈಕ್ರೋ ಫೈನಾನ್ಸ್ ಹರಡಿದೆ. ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಲೇಬೇಕು. ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡುತ್ತೇವೆ. ಸುಗ್ರೀವಾಜ್ಞೆ ಮೂಲಕ ಕಡಿವಾಣ ಹಾಕಬೇಕು. ಇದರ ಜೊತೆಗೆ ಸುಗ್ರೀವಾಜ್ಞೆ ದುರುಪಯೋಗ ಆಗುವುದನ್ನು ತಡೆಗಟ್ಟಬೇಕು. ಆ ನಿಟ್ಟಿನಲ್ಲೂ ರಾಜ್ಯ ಸರ್ಕಾರ ಕ್ರಮ ವಹಿಸಲಿ” ಎಂದು ಹೇಳಿದರು.
ಸಮಾಜಕ್ಕೆ ಮಡಿವಾಳ ಸಮುದಾಯದ ಕೊಡುಗೆ ಅಪಾರವಾಗಿದೆ. ಮೈಸೂರಿನಲ್ಲಿ ಈ ಸಮುದಾಯಕ್ಕೆ ಶಾಶ್ವತವಾದ ಕಲ್ಯಾಣ ಮಂಟಪ ಆಗಬೇಕು ಎಂದು ಸಮುದಾಯದವರು ಮನವಿ ಮಾಡಿಕೊಂಡಿದ್ದಾರೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವಂತಹ ಕೆಲಸಮಾಡುತ್ತೇನೆ ಎಂದರು.