ಬೆಂಗಳೂರು: ದಾಖಲಾತಿ ತಿದ್ದುವ ಪರಿಸ್ಥಿತಿ ನಮಗೆ ಬಂದಿಲ್ಲ. ಸಿಎಂ ಪತ್ನಿ ಅವರ ದಾಖಲಾತಿ ತಿದ್ದುಪಡಿ ಆಗಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
ಹೆಲಿಕಾಪ್ಟರ್‌ನಲ್ಲಿ ಹೋಗಿ ಬಂದವರು ದಾಖಲಾತಿ ತಿದ್ದಿರಬಹುದು ಎಂಬ ಕುಮಾರಸ್ವಾಮಿ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. ದಾಖಲೆ ತಿದ್ದುವಂತ ಪರಿಸ್ಥಿತಿ ನಮಗೆ ಬಂದಿಲ್ಲ. ಅಂತಹ ನೀಚ ಕೆಲಸಕ್ಕೆ ನಾವ್ಯಾರೂ ಇಳಿದಿಲ್ಲ. ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಅಲ್ಲಿ ಬೇರೇನೋ ಆಗಿದೆ ಅನ್ನೋದು ಅಲ್ಲ. ಇದು ನಮ್ಮ ಪೋರ್ಟ್ ಪೊಲೀಯೋ ಅಲ್ಲ. ಏನು ತಪ್ಪಾಗೋದೆ ಇಲ್ವಾ? ಜಮೀನಿಗೆ ಪರಿಹಾರ ನೀಡಿಲ್ಲ. ಅಷ್ಟೇ ವಿಸ್ತೀರ್ಣದ ಜಮೀನು ಎಂದು ಹೇಳಿದ್ದಾರೆ. ಅಲ್ಲಿ ವರ್ಷ ತಪ್ಪಾಗಿರಬಹುದು. ಇಲ್ಲವೇ ಸಮಾನಾಂತರ ಬಡಾವಣೆಯಲ್ಲಿ ನೀಡುವಂತೆ ಕೋರುತ್ತೇನೆ ಎಂದು ಬಹಳ ಸ್ಪಷ್ಟವಾಗಿಯೇ ಹೇಳಿದ್ದಾರೆ. ವಿಜಯನಗರ ಲೇಔಟ್ ಅಲ್ಲಿ ಅಂತ ಎಲ್ಲಿ ಬರೆದಿದ್ದಾರೆ? ಸಮಾನಾಂತರ ಜಾಗದಲ್ಲಿ ಅಂತ ಬರೆದಿದ್ದಾರೆ. ಮಾಧ್ಯಮಗಳು ಎಲ್ಲವನ್ನು ನೋಡಿ ಹಾಕಬೇಕು ಎಂದು ಮಾಧ್ಯಮಗಳ ಮೇಲೆ ಅನುಮಾನ ವ್ಯಕ್ತಪಡಿಸಿದರು.
ತಿದ್ದುವಂತ ನೀಚ ಕೃತ್ಯವನ್ನು ಯಾರು ಮಾಡಿಲ್ಲ. ಕುಮಾರಸ್ವಾಮಿ ಹೇಳಿಕೆಗೆ ನಾನು ಮಾತನಾಡಲ್ಲ. ಅವರು ಯಾವತ್ತೂ ಹೆಲಿಕಾಪ್ಟರ್‌ನಲ್ಲಿ ಹೋಗೇ ಇಲ್ವಾ? ಕುಮಾರಸ್ವಾಮಿಗೆ ನಾನು ಹೇಳ್ತೇನೆ ನಿಮ್ಮಲ್ಲಿ ಏನೇ ದಾಖಲೆ ಇದ್ದರೂ ಕೋರ್ಟ್‌ಗೆ ಕೊಡಿ. ಯಾಕೆ ನೀವು ಸುಮ್ಮನೆ ಅಪ ಪ್ರಚಾರ ಮಾಡುತ್ತೀರಿ. ನ್ಯಾಯಾಧೀಶರೇ ನಾವು ಬಗೆಹರಿಸುತ್ತೇವೆ ಅಂದಿದ್ದಾರೆ. ಅಲ್ಲಿಯವರೆಗೆ ಕಾಯೋಕೆ ಏನು? ಏನೇ ದಾಖಲಾತಿ ಇದ್ದರು ನೀವು ಕೋರ್ಟ್ ಕೊಡಿ. ನ್ಯಾಯಾಲಯ ಅದನ್ನು ಪರಿಗಣಿಸುತ್ತದೆ ಎಂದು ಕಿಡಿಕಾರಿದರು.