ಬೆಂಗಳೂರು : ಕಾವೇರಿ ಭಾಗದ ಪ್ರದೇಶದಲ್ಲಿ ನಮಗೆ ೧೦೬ ಟಿಎಂಸಿ ನೀರಿನ ಅಗತ್ಯವಿದ್ದು, ಇದೀಗ ೫೬ ಟಿಎಂಸಿ ನೀರು ಸಂಗ್ರಹವಿದೆ. ಎರಡು ದಿನಗಳ ಕಾಲ ಮಳೆ ಬಿದ್ದ ಕಾರಣ ಅ. ೧ರಂದು ೧೩,೦೦೦, ೨ರಂದು ೨೩,೦೦೦, ೩ರಂದು ೨೦,೦೦೦, ೪ರಂದು ೧೫,೦೦೦, ೫ರಂದು ೧೦,೦೦೦ ಕ್ಯೂಸೆಕ್ ನೀರು ಒಳಹರಿವಿನಮೂಲಕ ಸಂಗ್ರಹವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ರಾಜ್ಯದ ರೈತರ ಹಾಲಿ ಬೆಳೆಗಳನ್ನು ನಾವು ರಕ್ಷಿಸಿದ್ದೇವೆ. ಇದು ಸಮಾಧಾನದ ವಿಷಯ. ರಾಜ್ಯದಲ್ಲಿ ಬರ ಘೋಷಣೆಯಾಗಿದ್ದು, ಮುಂದೆ ಯಾವುದೇ ಬೆಳೆ ಹಾಕಬಾರದು ಎಂದು ರೈತರಿಗೆ ಸೂಚಿಸಿದ್ದೇವೆ. ಮುಂದಿನ ತಿಂಗಳು ಮತ್ತೆ ಮಳೆ ಬೀಳುವ ಸಾಧ್ಯತೆ ಇದೆ. ಈ ವರ್ಷ ಸಂಕಷ್ಟವಿದೆ. ನಾವು ದಿನನಿತ್ಯ ಮಳೆಗಾಗಿ ಪ್ರಾರ್ಥನೆ ಮಾಡುತ್ತಲೇ ಇದ್ದೇವೆ ಎಂದರು.
ತಮಿಳುನಾಡಿಗೆ ನೀರು ಹರಿಸುವ ಹಾಗೂ ಮೇಕೆದಾಟು ವಿಚಾರಕ್ಕೆ, ತಮಿಳುನಾಡಿಗೆ ೩ ಸಾವಿರ ಕ್ಯೂಸೆಕ್ ನೀರು ಬಿಡಲು ನಮ್ಮಲ್ಲಿ ನೀರಿಲ್ಲ ಎಂದು ಮೇಲ್ಮನವಿ ಸಲ್ಲಿಸಿದ್ದೇವೆ. ಮೇಕೆದಾಟು ಯೋಜನೆ ಜಾರಿ ಪ್ರಸ್ತಾವನೆ ಇಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟಕ್ಕೆ ಸಿದ್ಧತೆಯಲ್ಲಿದ್ದೇವೆ. ಹಂತಹಂತವಾಗಿ ನಾವು ಹೋಗಬೇಕು. ಕರ್ನಾಟಕ ಸರ್ಕಾರ ಎಲ್ಲರ ಅನುಭವ, ಅಭಿಪ್ರಾಯ ಪಡೆದು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ ಎಂದರು.