ಮಂಡ್ಯ: ವಿಶ್ವವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿ.ಪಂ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಹಿನ್ನಲೆ ಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ, ಬೃಹತ್ ಸಂವಿಧಾನ ಪೀಠಿಕೆ ಬೋಧನೆ ಕಾರ್ಯಕ್ರಮವನ್ನು ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಭಾರತ ಸಂವಿಧಾನದ ಪೀಠಿಕೆ ಅನಾವರಣ ಮಾಡಿದರು. ಬಳಿಕ ಸಂವಿಧಾನ ಪೀಠಿಕೆ ಬೋಧಿಸಿದರು.
ಬಳಿಕ ಮಾತನಾಡಿದ ಅವರು, ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟು ನಮಗೆ ಬದುಕಲು ಅವಕಾಶ ಕೊಟ್ಟಿದ್ದಾರೆ. ಸಂವಿಧಾನವನ್ನು ನೆನಪು ಮಾಡಿಕೊಳ್ಳುವ ದಿನ. ನಾವು ಯಾರ ಮುಂದೆ ಕೈ ಕಟ್ಟುವ ಅವಶ್ಯಕತೆ ಇಲ್ಲ. ಅದು ಅಂಬೇಡ್ಕರ್ ಅವರ ಸಂವಿಧಾನ ಕಾರಣ. ಅವರಿಗೆ ಪ್ರತಿಯೊಬ್ಬ ಪ್ರಜೆ ಸೆಲ್ಯೂಟ್ ಹೊಡೆಯಬೇಕು. ಸಂವಿಧಾನ ಕೊಟ್ಟು ಜನರ ಹಕ್ಕನ್ನು ಕೊಟ್ಟಿದ್ದಾರೆ. ಅಂತಹ ನಾಯಕರನ್ನು ನಾವು ಪೂಜಿಸಬೇಕು ಎಂದರು.
ಇವತ್ತು ನಮ್ಮ ಸಿಎಂ ಸಿದ್ದರಾಮಯ್ಯ ಅವರು ಮಕ್ಕಳಿಗೆ ಸಂವಿಧಾನ ಓದಿಸುವ ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ. ಸಂವಿಧಾನದ ದಾರಿಯಲ್ಲಿ ನಡೆದುಕೊಂಡು ಹೋಗ್ತಿದ್ದೇವೆ. ಯಾರು ಸಂವಿಧಾನದ ಬಗ್ಗೆ ಲಘುವಾಗಿ ಮಾತನಾಡುವವರಿಗೆ ಈ ದೇಶದಲ್ಲಿ ಬದುಕುವ ಹಕ್ಕಿಲ್ಲ. ಜಾತಿ, ಮತ, ಧರ್ಮ, ಪಕ್ಷ ಮರೆತು ಸಂವಿಧಾನದ ಪರ ನಿಲ್ಲಬೇಕು. ಸಂವಿಧಾನವೇ ನಮ್ಮೆಲ್ಲರ ಶಕ್ತಿ. ಸಂವಿಧಾನದ ಹಕ್ಕಿನಿಂದ ಯಾರು ಬೇಕಾದರೂ ಪ್ರಧಾನಿಯಾಗಬಹುದು ಎಂದು ಹೇಳಿದರು.
ಕಾವೇರಿ ಪ್ರಾಧಿಕಾರದ ಮುಂದೆ ಸಮರ್ಥವಾದ ಮಂಡಿಸಲಿದ್ದೇವೆ
ಕಾವೇರಿ ಪ್ರಾಧಿಕಾರದ ಮುಂದೆ ನೀರಿನ ಕೊರತೆ ಬಗ್ಗೆ ಹೇಳಿದ್ದೇವೆ. ಶೀಘ್ರದಲ್ಲಿ ಸಭೆ ನಡೆಯಲಿದೆ ಅಲ್ಲಿಯೂ ಸಮರ್ಥ ವಾದ ಮಂಡಿಸಲಿದ್ದೇವೆ. ಸಮಿತಿಯ ಆದೇಶ ವಾಪಾಸ್ ಪಡೆಯಲು ಆಗ್ರಹಿಸುತ್ತೇವೆ ಎಂದರು.
ನಮ್ಮಲ್ಲಿ ಬೆಳೆಗಳು ಹಾಳಾಗುತ್ತಿವೆ, ಮಳೆ ಬರದಿದ್ದರೆ ಕುಡಿಯುವ ನೀರಿಗೂ ತೊಂದರೆ ಆಗಲಿದೆ. ಪ್ರಾಧಿಕಾರದ ಆದೇಶವನ್ನು ಗಮದಲ್ಲಿಟ್ಟುಕೊಂಡು ಸುಪ್ರೀಂ ಮುಂದೆ ಹೋಗ್ತೇವೆ. ಕೋರ್ಟಿಗೂ ವಾಸ್ತವ ಸ್ಥಿತಿ ಮನವರಿಕೆ ಮಾಡಲಿದ್ದೇವೆ. ವಾಸ್ತವವಾಗಿ ನಮ್ಮಲ್ಲಿ ನೀರಿಲ್ಲ ಹಾಗಾಗಿ ನಾವು ನೀರು ಬಿಡಲು ಸಾಧ್ಯವಿಲ್ಲ. ಪ್ರಾಧಿಕಾರ ವಾಸ್ತವ ಸ್ಥಿತಿ ಗಮನಿಸಿ ಆದೇಶ ನೀಡುವ ವಿಶ್ವಾಸವಿದೆ ಎಂದರು.
ಮುಂದಿನ ವಾರದಲ್ಲಿ ಮಳೆ ಬರುವ ಸಾಧ್ಯತೆ ಇದೆ. ಆಗ 10-12 ಟಿಎಂಸಿ ನೀರು ಶೇಕರಣೆ ಆದರೆ ಎಲ್ಲರಿಗೂ ಒಳ್ಳೆಯದಾಗಲಿದೆ. ಕಷ್ಟ ಹೇಳಿ ಕೊಳ್ಳಬಹುದು ಆದರೆ ಸರ್ವೋಚ್ಚ ನ್ಯಾಯಾಲಯದ ಆದೇಶತೀರಸ್ಕರಿಸಲಾಗಲ್ಲ. ನೀರಿಲ್ಲ ಎನ್ನಬಹುದು, ಬಿಡಲ್ಲ ಎಂದು ಹೇಳಲಾಗಲ್ಲ. ನಮ್ಮ ರೈತರಿಗೆ ಒಳಿತಾಗಲೂ ನಾವು ಎಲ್ಲದಕ್ಕೂ ಸಿದ್ದರಿದ್ದೇವೆ ಎಂದರು.
ಬಿಜೆಪಿಯವರು ಪಾದಯಾತ್ರೆ ಮಾಡಿದರೆ ಪ್ರಯೋಜನವಿಲ್ಲ
ಮಳೆ ಕೊರತೆ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಅವರು ಅನುಭವಸ್ಥರು, ಮುಂಚೆ ಹೇಳಿದಿದ್ದರೆ ಸಲಹೆ ತೆಗೆದುಕೊಳ್ತಿದ್ದೆವು. ಮುಂದಿನ ಬಾರಿ ಅವರ ಸಲಹೆ ತೆಗೆದುಕೊಳ್ತೇವೆ. ಕೇಂದ್ರ ಸರ್ಕಾರದ ಅವರದ್ದೇ ಇದೆ. ನಿನ್ನೆ ನಡೆದ ಸರ್ವ ಪಕ್ಷ ಸಭೆಗೆ ಬಿಜೆಪಿ ಬಂದಿಲ್ಲ. ಇದರ ಅರ್ಥ ವಾಸ್ತವ ಸತ್ಯ ಚರ್ಚೆಗೆ ಅವರು ರೆಡಿ ಇಲ್ಲ. ಹಾಗಾಗಿ ಅವರು ಪಾದಯಾತ್ರೆ ಮಾಡಿದ್ರೆ ಪ್ರಯೋಜನ ಇಲ್ಲ ಎಂದು ಹೇಳಿದರು.
ಮೋದಿ ಬೆಂಗಳೂರಿಗೆ ಬಂದಾಗ ಬಿಜೆಪಿ ಅವರಿಗೆ ಟಾಟಾನೂ ಮಾಡಿಲ್ಲ. ಬಿಜೆಪಿ ಅವರಿಗೆ ಮೋದಿ ಕಂಡರೆ ಭಯ ಇದೆ. ಭೇಟಿಗೆ ಅವಕಾಶ ಕೊಡ್ತಾರೋ ಇಲ್ವೋ ಅಂತ ಅವರಿಗೆ ಅನುಮಾನವಿದ್ದು, ಮೋದಿ ಬಳಿ ನಿಯೋಗ ಕರೆದೊಯ್ಯಲು ಅವರಿಗೆ ಆಗ್ತಿಲ್ಲ ಎಂದು ತಿರುಗೇಟು ನೀಡಿದರು.
ಬರ ತಾಲ್ಲೂಕುಗಳ ಅಧ್ಯಯನ
161 ತಾಲೂಕು ಬರ ತಾಲೂಕು ಎಂದು ಘೋಷಣೆ ಮಾಡಲಾಗಿದೆ. ಸಂಪೂರ್ಣ ಮಾಹಿತಿ ಕಲೆಹಾಕಿ, ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಘೋಷಣೆ ಮಾಡಿದ್ದೇವೆ. ಇನ್ನೊಂದು ವಾರದಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಲಿದ್ದೇವೆ. ಬರ ತಾಲೂಕುಗಳಲ್ಲಿ ಅಧ್ಯಯನ ನಡೆಸಲಿದ್ದೇವೆ. ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಿಲಿದ್ದೇವೆ. ರೈತರ ವಿಚಾರದಲ್ಲಿ ದುಡ್ಡು ಇದೆಯಾ, ಇಲ್ವೋ ಅನ್ನುವುದಲ್ಲ, ನಮ್ಮ ಕರ್ತವ್ಯ ಮಾಡ್ತೀವಿ ಎಂದು ತಿಳಿಸಿದರು.
ಜೆಡಿಎಸ್ ಗೆ ಬಿಜೆಪಿ, ಬಿಜೆಪಿಗೆ ಜೆಡಿಎಸ್ ಅನಿವಾರ್ಯ
ಕಳೆದ 40-50 ವರ್ಷದಲ್ಲಿ ವಿರೋಧ ಪಕ್ಷದ ನಾಯಕರನ್ನ ಮಾಡದಿರುವುದು ಇದೆ ಮೊದಲು. ಎಂತಹ ಪರಿಸ್ಥಿತಿ ಬಿಜೆಪಿ ಅವರಿಗೆ ಬಂದಿದೆ. ಅವರಿಗೆ ನಾಯಕತ್ವ, ಒಗ್ಗಟ್ಟು ಇಲ್ಲ. ಅನಿವಾರ್ಯವಾಗಿ ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿದ್ದಾರೆ. ಪಕ್ಷದ ಅಸ್ಥಿತ್ವಕ್ಕಾಗಿ ಜೆಡಿಎಸ್ ಕೂಡ ಬಿಜೆಪಿ ಜೊತೆ ಹೋಗ್ತಿದೆ. ಜೆಡಿಎಸ್ ಗೆ ಬಿಜೆಪಿ, ಬಿಜೆಪಿಗೆ ಜೆಡಿಎಸ್ ಅನಿವಾರ್ಯವಾಗಿದೆ ಎಂದರು.
ಸರಳ ದಸರಾ ಆಚರಣೆ
ಸಂದಿಗ್ಧ ಪರಿಸ್ಥಿತಿಯಲ್ಲಿ ದಸರಾ ಆಚರಣೆ ವಿಚಾರವಾಗಿ ಮಾತನಾಡಿ, ದಸರಾ ಆಚರಣೆ ಪರಂಪರೆಯಿಂದ ಬಂದಿದೆ. ದಸರಾವನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಆಗಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಎಷ್ಟು ಸಾಧ್ಯ ಅಷ್ಟು ಸರಳವಾಗಿ ಮಾಡುತ್ತೇವೆ ಎಂದರು.
ಇದೇ ವೇಳೆ ಸುಮಲತಾಗೆ ಟಾಂಗ್ ನೀಡಿದ ಸಚಿವ ಚಲುವರಾಯಸ್ವಾಮಿ, ಸುಮಲತಾ ಈಗ ಅತಂತ್ರದಲ್ಲಿ ಇದ್ದಾರೋ ಇಲ್ವಾ ಅವರನ್ನು ಕೇಳಿ. ಅವರು ಜೆಡಿಎಸ್ ಜೊತೆ ಒಪ್ಪಿಕೊಂಡಿದ್ದಾರೋ, ಬಿಜೆಪಿ ಜೊತೆ ಇದ್ದಾರೋ ನನಗೆ ಗೊತ್ತಿಲ್ಲ. ಪಾಪ ಅವರು ಕೇಂದ್ರದಲ್ಲಿ ಮೋದಿ, ಅಮೀತ್ ಷಾ ಜೊತೆ ಚನ್ನಾಗಿ ಇದ್ದಾರೆ. ಜಿಲ್ಲೆಗೆ ಅನುಕೂಲವಾಗಲಿ ಎಂದು ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಚುನಾವಣೆ ಆದಾಗಿನಿಂದ ಅವರ ನಿಲುವಿಗೆ ಅವರೇ ಸಮರ್ಥರು. ಅವರು ಏನು ಬೇಕಾದರು ನಿರ್ಧಾರ ತೆಗೆದುಕೊಳ್ಳಿ ನಮಗೂ ಅದಕ್ಕೂ ಸಂಬಂಧ ಇಲ್ಲ. ಅವರು ಬಿಜೆಪಿ ಜೊತೆ ಹೋಗ್ತಾರೋ, ಜೆಡಿಎಸ್ ಜೊತೆ ಹೋಗ್ತಾರೋ, ಪಕ್ಷೇತರವಾಗಿ ಇರ್ತಾರೋ ಅವರಿಗೆ ಬಿಟ್ಟಿದ್ದು ಎಂದರು.
ಕಾವೇರಿ ವಿಚಾರನ ಅಲ್ಲಿ ಕೇಂದ್ರದಲ್ಲಿ ಹೋಗಿ ಮಾತಾಡಬೇಕು. ಅದರ ಬದಲು ನಮ್ಮನ್ನ ಡ್ಯಾಂ ಬಳಿ ಹೋಗಿಲ್ಲಾ ಅಂತಾರೆ. ಡ್ಯಾಂನಲ್ಲಿ ನೀರು ಎಷ್ಟು ಇದೆ ಅಂತಾ ನಮಗೆ ತಿಳಿದುಕೊಳ್ಳಲು ಗೊತ್ತಿಲ್ವಾ ? ಡ್ಯಾಂ ಬಳಿ ಉಸ್ತುವಾರಿ, ನೀರಾವರಿ ಸಚಿವರು ಹೋಗಿಲ್ಲ ಅಂತಾರೆ. ಮೊದಲು ಮೇಡಂ ಅಮಿತ್ ಷಾ ಬಳಿ ಹೋದರೆ ಸಂತೋಷ ಎಂದು ತಿಳಿಸಿದರು.
ಹರಿಪ್ರಸಾದ್ ಹೇಳಿಕೆಯನ್ನು ಪಕ್ಷ ಖಂಡಿಸಿದೆ
ಬಿ.ಕೆ.ಹರಿಪ್ರಸಾದ್ ಸ್ವಪಕ್ಷದ ವಿರುದ್ಧ ವಾಗ್ದಾಳಿ ವಿಚಾರ ಕುರಿತು ಪ್ರತಿಕ್ರಿಯಿಸಿ, ಹರಿಪ್ರಸಾದ ಹೇಳಿಕೆಯನ್ನು ಇಡೀ ಪಕ್ಷ ಖಂಡಿಸಿದೆ. ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದ್ದಾರೆ, ಅವರಿಗೆ ನೋಟೀಸ್ ಸಹ ಬಂದಿದೆ. ರಾಜ್ಯ ಕಾಂಗ್ರೆಸ್ ನ ಹಲವು ಅಧಿಕಾರವನ್ನು ಹರಿಪ್ರಸಾದ್ ಅನುಭವಿಸಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಮಾತಾನಾಡಿರೋದು ಪಕ್ಷಕ್ಕೆ ಅಗೌರವ ತಂದಿದೆ. ಇನ್ನೂ ಮುಂದೆ ಹೀಗೆ ಮಾತನಾಡಲ್ಲ ಅಂದುಕೊಂಡಿದ್ದೇನೆ. ನನಗೂ ಅವರ ಮೇಲೆ ಗೌರವ ಇತ್ತು. ಇಂತಹ ಸಂದರ್ಭದಲ್ಲಿ ಅವರಿಂದ ಇಂತಹ ಮಾತುಗಳು ಬರಬಾರದು ಎಂದರು.
ಬಿಜೆಪಿಯಲ್ಲಿ ಯತ್ನಾಳ್ ಮೂರು ವರ್ಷ ಬಿಜೆಪಿ ಬಗ್ಗೆ ಮಾತನಾಡಿದರು. ಯತ್ನಾಳ್‌ಗೆ ಒಂದೇ ಒಂದು ನೋಟೀಸ್ ಕೊಟ್ಟಿಲ್ಲ. ನಮ್ಮ ಪಕ್ಷದಲ್ಲಿ ಮಾತನಾಡಿದ ಒಂದೇ ಒಂದು ದಿನಕ್ಕೆ ನೋಟೀಸ್ ಕೊಟ್ಟಿದೆ. ಇದೇ ಬಿಜೆಪಿ ಕಾಂಗ್ರೆಸ್‌ಗೆ ಇರುವ ವ್ಯತ್ಯಾಸ. ರಾಷ್ಟ್ರೀಯ ನಾಯಕರಿಗೆ ನಮ್ಮನ್ನ ಕಂಟ್ರೋಲ್ ಮಾಡುವ ಶಕ್ತಿ ಇದೆ. ವೈಯಕ್ತಿಕವಾಗಿ ಜಾರಕಿಹೋಳಿ ಬೇಟಿ ಮಾಡಿರೋದು ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಗಣಿಗ ರವಿಕುಮಾರ್, ಎಂಎಲ್ಸಿ ದಿನೇಶ್ ಗೂಳಿಗೌಡ, ಡಿಸಿ ಡಾ.ಕುಮಾರ್, ಎಡಿಸಿ ನಾಗರಾಜು, ಎಸ್ಪಿ ಎನ್.ಯತೀಶ್, ಎಎಸ್ಪಿ ತಿಮ್ಮಯ್ಯ, ಸೇರಿ ಹಲವರು ಭಾಗಿಯಾಗಿದ್ದರು.